Friday, October 23, 2026
HomeLocal Newsಮನೆ ನಂಬರ್ ಉಳಿಸಿಕೊಳ್ಳಲು ‘ಪಂಚಾಯಿತಿ ಚಲೋ’

ಮನೆ ನಂಬರ್ ಉಳಿಸಿಕೊಳ್ಳಲು ‘ಪಂಚಾಯಿತಿ ಚಲೋ’

ಯಲ್ಲಾಪುರ ಬಿಜೆಪಿ ಮಂಡಳದಿಂದ ಪಂಚಾಯಿತಿ ಚಲೋ ಸರಣಿ ಹೋರಾಟಕ್ಕೆ ಚಾಲನೆ

ಯಲ್ಲಾಪುರ: ಅತಿಕ್ರಮಣ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡವರ ಮನೆ ನಂಬರ್ ರದ್ದುಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಆರೋಪಿಸಿ ಯಲ್ಲಾಪುರ ಬಿಜೆಪಿ ಮಂಡಳದ ವತಿಯಿಂದ ಹಮ್ಮಿಕೊಂಡಿರುವ ‘ಪಂಚಾಯಿತಿ ಚಲೋ’ ಸರಣಿ ಹೋರಾಟಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಒಂದು ವಾರದ ಕಾಲ ನಡೆಯಲಿರುವ ಸರಣಿ ಪ್ರತಿಭಟನೆಯ ಅಂಗವಾಗಿ ಸೋಮವಾರ ಮಲವಳ್ಳಿ, ಮಾವಿನಮನೆ ಹಾಗೂ ವಜ್ರಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಹಾಗೂ ಅತಿಕ್ರಮಣದಾರರು ಪ್ರತಿಭಟನೆ ನಡೆಸಿದರು. ಪ್ರತಿದಿನ ಎರಡರಿಂದ ಮೂರು ಗ್ರಾಮ ಪಂಚಾಯಿತಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ಬಿಜೆಪಿ ಮಂಡಳ ಯೋಜನೆ ರೂಪಿಸಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಕಳೆದ ಮೂರೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಬಡವರಿಗೆ ಒಂದೇ ಒಂದು ಮನೆ ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ. ಇದೀಗ ಬಡವರು ಅನಿವಾರ್ಯವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ತೆರವುಗೊಳಿಸುವ ಉದ್ದೇಶದಿಂದ ಅರಣ್ಯ, ಸರ್ಕಾರಿ ಹಾಗೂ ಗಾಂವಠಾಣ ಜಾಗದಲ್ಲಿ ನಿರ್ಮಿಸಿರುವ ಮನೆಗಳಿಂದ ಕರ ವಸೂಲಿ ಸ್ಥಗಿತಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುತ್ತೋಲೆ ಹೊರಡಿಸಿದೆ ಆರೋಪಿಸಿದರು.

ಈ ವಿಚಾರದಲ್ಲಿ ಜನರು ಎಚ್ಚೆತ್ತುಕೊಂಡು ಸಂಘಟಿತರಾಗಿ ಹೋರಾಟ ನಡೆಸುವ ಮೂಲಕ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಕೋಣೆಮನೆ ಕರೆ ನೀಡಿದರು.

ಬಿಜೆಪಿ ಮುಖಂಡ ಉಮೇಶ್ ಭಾಗ್ವತ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಮೇಲೆ ನಿರಂತರವಾಗಿ ತೊಂದರೆ ಉಂಟುಮಾಡುತ್ತಿದೆ. ಈ ಹಿಂದೆ ಏಕಾಏಕಿ ಅಡಕೆ ನಿಷೇಧದ ಆತಂಕ ಸೃಷ್ಟಿಸಿ, ಬಳಿಕ ರಾತ್ರೋರಾತ್ರಿ ಆದೇಶವನ್ನು ವಾಪಸ್ ಪಡೆಯಲಾಗಿತ್ತು. ಇದರ ಹಿಂದಿನ ಉದ್ದೇಶವೇನು ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದೆ. ಕೇಂದ್ರ ಸರ್ಕಾರದ ನೆರವಿನಿಂದ ಮನೆಗಳ ನಿರ್ಮಾಣಕ್ಕೂ ಇಲ್ಲಸಲ್ಲದ ಅಡ್ಡಿ ಮಾಡಲಾಗುತ್ತಿದೆ. ತಾನು ಮಾಡುವುದಿಲ್ಲ, ಬೇರೆಯವರು ಮಾಡಿದರೂ ಸಹಿಸುವುದಿಲ್ಲ ಎಂಬುದು ಕಾಂಗ್ರೆಸ್ ಸರ್ಕಾರದ ಧೋರಣೆಯಾಗಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರದ ಸುತ್ತೋಲೆಯ ಪ್ರಕಾರ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಶೇ.60ರಿಂದ 80ರಷ್ಟು ಮನೆಗಳು ಮನೆ ನಂಬರ್ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಈ ಕುರಿತು ಪಂಚಾಯಿತಿ ಅಧಿಕಾರಿಗಳನ್ನು ಪ್ರಶ್ನಿಸಿದಾಗಲೂ ಇದೇ ರೀತಿಯ ಮಾಹಿತಿ ದೊರೆತಿದೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಭಟನೆಯಲ್ಲಿ ಮಂಡಳ ಉಪಾಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ರಸ್ಮಾ ಕುಣಬಿ, ನಾರಾಯಣ ಕುಣಬಿ, ವಿ.ಪಿ. ಹೆಬ್ಬಾರ, ರವಿ ಹುಳಸೆ, ವೆಂಕಟ್ರಮಣ ಕುಣಬಿ, ಜಿ.ಆರ್. ಭಾಗ್ವತ, ಮಹೇಶ ಗಾಂವಕರ, ಗೋಪಾಲ ಸಿದ್ದಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಅತಿಕ್ರಮಣದಾರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share