Friday, October 23, 2026
HomeStateಬಿಸ್ಲಕೊಪ್ಪವೂ ಪರಿಸರ ಸೂಕ್ಷ್ಮ ಪ್ರದೇಶ ; ಇಲ್ಲೇನೋ ದೋಷವಿದೆ!

ಬಿಸ್ಲಕೊಪ್ಪವೂ ಪರಿಸರ ಸೂಕ್ಷ್ಮ ಪ್ರದೇಶ ; ಇಲ್ಲೇನೋ ದೋಷವಿದೆ!

ಬೆಂಗಳೂರು: ಕಸ್ತೂರಿರಂಗನ್ ವರದಿ ಜಾರಿಯಿಂದ ಉತ್ತರ ಕನ್ನಡ ಜಿಲ್ಲೆಯ ಜನರ ಬದುಕಿನ ಮೇಲೆ ಪರಿಣಾಮ ಬೀರಲಿದೆ ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಹೇಳಿದರು.

ಕಸ್ತೂರಿರಂಗನ್ ವರದಿ ಕುರಿತು ನಡೆದ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯ 604 ಹಳ್ಳಿಗಳು ಹಾಗೂ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ 45 ಗ್ರಾಮ ಪಂಚಾಯಿತಿಗಳು ವರದಿ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರುತ್ತವೆ ಎಂದು ಹೇಳಿದರು.

ಬಯಲುಸೀಮೆ ಪ್ರದೇಶವಾಗಿರುವ ಬಿಸಿಲುಕೊಪ್ಪ ಪಂಚಾಯಿತಿಯನ್ನೂ ಕಸ್ತೂರಿರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸಿರುವುದು ವರದಿಯಲ್ಲಿನ ದೋಷಕ್ಕೆ ಉದಾಹರಣೆಯಾಗಿದೆ. ಇಂತಹ ಅಂಶಗಳನ್ನು ಗಮನಿಸಿದರೆ ವರದಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಎಂದು ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟರು.

ಉತ್ತರ ಕನ್ನಡ ಜಿಲ್ಲೆಯ ಜನರು ಈ ಹಿಂದೆ ಕೈಗಾ ವಿದ್ಯುತ್ ಯೋಜನೆ, ಸೀಬರ್ಡ್ ಸೇರಿದಂತೆ ಹಲವು ಬೃಹತ್ ಯೋಜನೆಗಳಿಗೆ ಸಹಕಾರ ನೀಡಿದ್ದಾರೆ. ಜಿಲ್ಲೆಯ ಜನರು ಅಭಿವೃದ್ಧಿ ಯೋಜನೆಗಳಿಗೆ ಸಹಕರಿಸುತ್ತಲೇ ಬಂದಿದ್ದಾರೆ ಎಂದು ಅವರು ಹೇಳಿದರು.

ಕಸ್ತೂರಿರಂಗನ್ ವರದಿ ವ್ಯಾಪ್ತಿಯಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದ 220 ಹಳ್ಳಿಗಳು ಬರುತ್ತವೆ ಎಂದು ತಿಳಿಸಿದ ಭೀಮಣ್ಣ ನಾಯ್ಕ, ಬೆಡ್ತಿ, ಅಘನಾಶಿನಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.82ರಷ್ಟು ಅರಣ್ಯ ಪ್ರದೇಶವಿದ್ದು, ಉಳಿದ ಶೇ.18ರಷ್ಟು ಪ್ರದೇಶದಲ್ಲಿ ಲಕ್ಷಾಂತರ ಜನರು ವಾಸಿಸುತ್ತಿದ್ದಾರೆ ಎಂದರು.

ಜನರ ಜೀವನ ಹಾಗೂ ಜಿಲ್ಲೆಯ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವಂತಹ ನಿರ್ಬಂಧಗಳು ಎದುರಾಗುವ ಹಿನ್ನೆಲೆಯಲ್ಲಿ ಕಸ್ತೂರಿರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದು. ವರದಿ ಜಾರಿಯಾದರೆ ಜನರ ಜೀವನ ಮತ್ತಷ್ಟು ದುಸ್ತರವಾಗಲಿದೆ ಎಂದು ಅವರು ವಿಧಾನಸಭೆಯಲ್ಲಿ ಹೇಳಿದರು.

ಕಸ್ತೂರಿರಂಗನ್ ವರದಿ ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಕುರಿತ ವಿಷಯದ ಚರ್ಚೆಗಾಗಿ ಕರ್ನಾಟಕ ವಿಧಾನಮಂಡಲದ ವಿಶೇಷ ಅಧಿವೇಶನ ಸೆ.21ರಿಂದ 23ರವರೆಗೆ ನಡೆಯುತ್ತಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share