ಕಾರವಾರ: ವಿದ್ಯುತ್ ಮಾರ್ಗಗಳ ನಿರ್ವಹಣೆ, ವಾಹಕ ಬದಲಾವಣೆ ಹಾಗೂ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಸೆ.23ರಂದು ಹೊನ್ನಾವರ, ಕಾರವಾರ ಹಾಗೂ ಕುಮಟಾ ತಾಲೂಕಿನ ಹಲವು ಪ್ರದೇಶಗಳಲ್ಲಿ ವಿವಿಧ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಹೊನ್ನಾವರ: ಗೇರುಸೊಪ್ಪ ಶಾಖೆಯ ಉಪ್ಪೋಣಿ ಫೀಡರ್ 11 ಕೆ.ವಿ ಮಾರ್ಗದ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಉಪ್ಪೋಣಿ ಫೀಡರ್ ವ್ಯಾಪ್ತಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರವಾರ: ಕಾರವಾರ ಹೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ವಾಹಕ ಬದಲಾವಣೆ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ತೇಲಂಗರೋಡ ಫೀಡರ್‌ನ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಕುಮಟಾ: ಕುಮಟಾ ಹೆಸ್ಕಾಂ ಉಪವಿಭಾಗದ ನಗರ ಶಾಖೆಯ 11 ಕೆ.ವಿ ಕುಮಟಾ ಟೌನ್ ಹಾಗೂ ಗ್ರಾಮೀಣ ಶಾಖೆಯ 11 ಕೆ.ವಿ ಧಾರೆಶ್ವರ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ 11 ಕೆ.ವಿ ಮಾರ್ಗ ಸ್ಥಳಾಂತರ ಕಾಮಗಾರಿ ನಡೆಯಲಿದೆ. ಹೀಗಾಗಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇದರ ಜೊತೆಗೆ 33 ಕೆ.ವಿ ಗೋಕರ್ಣ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಗಂಗಾವಳಿ, ಬಿಜ್ಜೂರ ಹಾಗೂ ಓಂ ಬೀಚ್ ಮಾರ್ಗದ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಸಂಬಂಧಪಟ್ಟ ಕಾಮಗಾರಿಗಳ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿರುವುದರಿಂದ ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಉಪವಿಭಾಗಗಳ ಅಧಿಕಾರಿಗಳು ಮನವಿ ಮಾಡಿದ್ದಾರೆ.


