ಶಿರಸಿ: ಕಸ್ತೂರಿ ರಂಗನ್ ವರದಿಗೆ ವಿರೋಧವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಡೆಸುತ್ತಿರುವ ನಿರಂತರ ಹೋರಾಟ ಹಾಗೂ ಮನೆ ಮನೆಗಳಿಂದ ಕೇಂದ್ರ ಸರ್ಕಾರಕ್ಕೆ ಲಿಖಿತ ಆಕ್ಷೇಪ ಸಲ್ಲಿಸಿರುವ ಕಾರ್ಯವನ್ನು ಮಾಜಿ ಸಚಿವ ಎಚ್.ಕೆ. ಪಾಟೀಲ್ ಪ್ರಶಂಸಿಸಿದ್ದಾರೆ.
ವಿಧಾನಸೌಧದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟದ ವಿವಿಧ ಹಂತಗಳನ್ನು ಪ್ರಸ್ತಾಪಿಸಿದರು. ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆಯ ಹೋರಾಟ ಇಂದು ಜನಚಳುವಳಿಯಾಗಿ ರೂಪುಗೊಂಡಿರುವುದು ಗಮನಾರ್ಹ ಎಂದರು.
ಕಸ್ತೂರಿ ರಂಗನ್ ವರದಿಗೆ ವಿರೋಧವಾಗಿ ಹೋರಾಟಗಾರರ ವೇದಿಕೆ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು. ಅರಣ್ಯವಾಸಿಗಳ ಹಕ್ಕುಗಳಿಗಾಗಿ ಹಲವು ಕಾನೂನು ಮತ್ತು ಸಾಮಾಜಿಕ ಹೋರಾಟಗಳು ನಡೆದಿದ್ದರೂ ಸಮಸ್ಯೆಗೆ ಸಂಪೂರ್ಣ ಪರಿಹಾರ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಹಿಂದಿನ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಕೈಗೊಂಡಿದ್ದ ನಿರ್ಣಯವನ್ನೂ ಸದನ ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್.ಕೆ. ಪಾಟೀಲ್ ಹೇಳಿದರು.
ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಸಮಾಜ ಚಿಂತಕ ಕಾಗೋಡು ತಿಮ್ಮಪ್ಪ ಮತ್ತು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ನೀಡಿದ ಬೆಂಬಲವೂ ಗಮನಾರ್ಹವಾಗಿದೆ ಎಂದು ಅವರು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 80 ಸಾವಿರ ಅರಣ್ಯವಾಸಿ ಕುಟುಂಬಗಳ ಸಾಂಸ್ಕೃತಿಕ ಹಾಗೂ ಜೀವನಾಧಾರಕ್ಕೆ ಕಸ್ತೂರಿ ರಂಗನ್ ವರದಿ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ವರದಿಯಲ್ಲಿರುವ ನ್ಯೂನತೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್.ಕೆ. ಪಾಟೀಲ್ ಹೇಳಿದರು.


