ಕಾರವಾರ: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆ.24ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಗಂಟೆಗೆ 30ರಿಂದ 40 ಕಿ.ಮೀ ವೇಗದ ಗಾಳಿಯೊಂದಿಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಮುಂಗಾರು ಸಿದ್ಧತಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರು ಜಿಲ್ಲೆಯ ಹವಾಮಾನ ಪರಿಸ್ಥಿತಿ ಹಾಗೂ ಅಗತ್ಯ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಸಾಮಾಜಿಕ ಜಾಲತಾಣಗಳು ಮತ್ತು ಸ್ಥಳೀಯ ಸುದ್ದಿ ಮಾಧ್ಯಮಗಳನ್ನು ಗಮನಿಸುವಂತೆ ಸೂಚಿಸಲಾಗಿದೆ.
ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಸಾರ್ವಜನಿಕರು ಹಾಗೂ ಮಕ್ಕಳು ನೀರು ನಿಂತಿರುವ ತಗ್ಗು ಪ್ರದೇಶ, ಕೆರೆ, ನದಿ ಹಾಗೂ ಸಮುದ್ರ ತೀರಗಳಿಗೆ ತೆರಳದಂತೆ ಪಾಲಕರು ಮುನ್ನೆಚ್ಚರಿಕೆ ವಹಿಸಬೇಕು. ಪ್ರವಾಸಿಗರೂ ನದಿ, ನೀರಿರುವ ಪ್ರದೇಶ ಹಾಗೂ ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ತಗ್ಗು ಪ್ರದೇಶಗಳಲ್ಲಿ ಅಥವಾ ಮಳೆಯಿಂದ ಅಪಾಯಕ್ಕೀಡಾಗುವ ಪ್ರದೇಶಗಳಲ್ಲಿ ವಾಸಿಸುವವರು ಮುನ್ನೆಚ್ಚರಿಕೆಯಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಶಿಥಿಲಾವಸ್ಥೆಯಲ್ಲಿರುವ ಮನೆ, ಕಂಪೌಂಡ್ ಅಥವಾ ಗೋಡೆಗಳ ಬಳಿ ವಾಸಿಸುತ್ತಿರುವವರು ಅಗತ್ಯವಿದ್ದಲ್ಲಿ ಸಂಬಂಧಿಸಿದ ತಹಶೀಲ್ದಾರರು ಗುರುತಿಸಿರುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕಾಲುಸಂಕ, ಕಿರು ಸೇತುವೆ ಸೇರಿದಂತೆ ನೀರು ಹರಿಯುವ ಮಾರ್ಗಗಳನ್ನು ದಾಟುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಅಥವಾ ಕುಸಿಯುವ ಹಂತದಲ್ಲಿರುವ ಮನೆ, ಕಂಪೌಂಡ್ ಅಥವಾ ಗೋಡೆ ಕಂಡುಬಂದರೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ತುರ್ತು ಸಂದರ್ಭಗಳು ಎದುರಾದಲ್ಲಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ: 08382-229857 ವಾಟ್ಸ್ಆ್ಯಪ್: 9483511015 ಸಂಪರ್ಕಿಸಲು ತಿಳಿಸಲಾಗಿದೆ.


