ಮುಂಡಗೋಡ: ತಾಲೂಕಿನ ಇಂದೂರುಕೊಪ್ಪ ಗ್ರಾಮದ ಗಣಪತಿ ಚಳವಟ್ಟಿ ಅವರ ಮನೆಯಲ್ಲಿ ವಿಷಪೂರಿತ ನಾಗರಹಾವು ಕಾಣಿಸಿಕೊಂಡು ಕುಟುಂಬಸ್ಥರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಹಾವು ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಗಸ್ತು ಅರಣ್ಯ ಪಾಲಕ ಹಾಗೂ ಉರಗ ರಕ್ಷಕರಾದ ಮುತ್ತುರಾಜ ಹಳ್ಳಿ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು ಅತ್ಯಂತ ಜಾಗರೂಕತೆಯಿಂದ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದರು. ಬಳಿಕ ಹಾವನ್ನು ಯಾವುದೇ ಹಾನಿಯಾಗದಂತೆ ಕಾಡಿಗೆ ಕೊಂಡೊಯ್ದು ಮರಳಿ ಬಿಟ್ಟರು.
ಹಾವು ರಕ್ಷಣೆ ವೇಳೆ ಮನೆಯವರಿಗೆ ಧೈರ್ಯ ತುಂಬಿದ ಅರಣ್ಯಾಧಿಕಾರಿ ಮುತ್ತುರಾಜ ಹಳ್ಳಿ, ಜನವಸತಿ ಪ್ರದೇಶಗಳಲ್ಲಿ ಹಾವುಗಳು ಕಂಡುಬಂದಾಗ ಭಯಭೀತರಾಗದೆ ಅವುಗಳಿಗೆ ಯಾವುದೇ ರೀತಿಯ ಹಾನಿ ಮಾಡದೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ ಮುತ್ತುರಾಜ ಹಳ್ಳಿ ಅವರಿಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದರು. ವನ್ಯಜೀವಿ ಸಂರಕ್ಷಣೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಅವರು ನಿರಂತರವಾಗಿ ತೊಡಗಿಸಿಕೊಂಡಿರುವ ಕಾರ್ಯಕ್ಕೆ ಸ್ಥಳೀಯರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.


