ಕಾರವಾರ: ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ರಸ್ತೆಯಲ್ಲಿ ನಿಂತಿದ್ದ ಬಿಡಾಡಿ ಜಾನುವಾರಿಗೆ ಡಿಕ್ಕಿ ಹೊಡೆದು, ಬಳಿಕ ಡಿವೈಡರ್ ಕಂಬಕ್ಕೂ ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.24ರಂದು ಬೆಳಗ್ಗೆ 5.30ರ ಸುಮಾರಿಗೆ ಜಿಎ.07.ಎನ್.2735 ನೋಂದಣಿ ಸಂಖ್ಯೆಯ ಕಾರನ್ನು ಕಾರವಾರದ ಕಡೆಯಿಂದ ಹಬ್ಬುವಾಡ ಕಡೆಗೆ ಆರೋಪಿ, ಕಾರವಾರ ಕೆಎಚ್ಬಿ ಕಾಲೋನಿಯ ಆಸಿಫ್ ಶೌಕತ ಅಲಿ ಅಣ್ಣಿಗೇರಿ ಚಲಾಯಿಸಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಕಾರವಾರ ಬಸ್ ಡಿಪೋ ಸಮೀಪದ ಸಿಎಂಸಿ ಗಾರ್ಡನ್ ಎದುರಿನ ರಸ್ತೆಯಲ್ಲಿ ಕಾರನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ ರಸ್ತೆಯ ಬದಿಯಲ್ಲಿ ನಿಂತಿದ್ದ ಬಿಡಾಡಿ ಜಾನುವಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಡಿಕ್ಕಿಯ ಬಳಿಕ ಕಾರಿನ ವೇಗವನ್ನು ನಿಯಂತ್ರಿಸಲಾಗದೆ ಡಿವೈಡರ್ ಕಂಬಕ್ಕೂ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ. ಅಲ್ಲದೆ, ಬಿಡಾಡಿ ಜಾನುವಾರಿಗೆ ತೀವ್ರ ಗಾಯಗಳಾಗಿವೆ ಎಂದು ದೂರುದಾರ ಝಾಕೀರ ಅಲಿ ಮೊಹಮದ ಶೇಖ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಕಾರಿನ ಚಾಲಕ ಆಸಿಫ್ ಶೌಕತ ಅಲಿ ಅಣ್ಣಿಗೇರಿ ವಿರುದ್ಧ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


