ಯಲ್ಲಾಪುರ: ಯಲ್ಲಾಪುರ ತಾಲೂಕು ಮಟ್ಟದ 17 ವರ್ಷ ವಯೋಮಿತಿಯೊಳಗಿನ ಕ್ರೀಡಾಕೂಟದಲ್ಲಿ ಭರತನಹಳ್ಳಿಯ ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯಿಂದ ಅತಿಹೆಚ್ಚು ಅಂಕ ಗಳಿಸಿದ ಮಂಚಿಕೇರಿ ವಲಯ ಸಮಗ್ರ ವೀರಾಗ್ರಣಿಯಾಗಿ ಹೊರಹೊಮ್ಮುವಲ್ಲಿ ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳ ಕೊಡುಗೆ ಪ್ರಮುಖವಾಗಿದೆ.
ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಾಲಕರ ಹಾಗೂ ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಪಡೆದರೆ, ವಾಲಿಬಾಲ್ನಲ್ಲಿ ಬಾಲಕರ ಹಾಗೂ ಬಾಲಕಿಯರ ತಂಡಗಳು ದ್ವಿತೀಯ ಸ್ಥಾನ ಗಳಿಸಿವೆ. ಎರಡೂ ವಿಭಾಗಗಳಲ್ಲಿ ತಲಾ ಐವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಸಂಗಮ್ ನಾಯ್ಕ್ ಲಾಂಗ್ ಜಂಪ್ ಹಾಗೂ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ರೋಹಿತ್ ಸಿದ್ದಿ ಚಕ್ರ ಎಸೆತದಲ್ಲಿ ಪ್ರಥಮ ಹಾಗೂ ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಕಿರಣ್ ಶಳ್ಕೆ ತ್ರಿವಿಧ ಜಿಗಿತದಲ್ಲಿ, ವಂದನ ಮರಾಠಿ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಸಿಂಚನ ನಾಯ್ಕ್ 200 ಮೀಟರ್ ಓಟ, ಸೌಜನ್ಯ ನಾಯ್ಕ್ 400 ಮೀಟರ್ ಓಟ, ಮೇಘನಾ ಮರಾಠಿ ನಡಿಗೆ ಸ್ಪರ್ಧೆ ಹಾಗೂ ಧನ್ಯ ನಾಯಕ್ 400 ಮೀಟರ್ ಹರ್ಡಲ್ಸ್ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಚೆಸ್ನಲ್ಲಿ ಮೇದಿನಿ ಹೆಗಡೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ರಿದಮಿಕ್ ಯೋಗದಲ್ಲಿ ಸಾನಿಕಾ ಮರಾಠಿ ಹಾಗೂ ಪವಿತ್ರಾ ಮರಾಠಿ ಪ್ರಥಮ ಸ್ಥಾನ ಪಡೆದಿದ್ದಾರೆ. ಆರ್ಟಿಸ್ಟಿಕ್ ಯೋಗದಲ್ಲಿ ಜನನಿ ಗೊಂಡಬಾಳ ಹಾಗೂ ಅದಿತಿ ದೇವಾಡಿಗ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬಾಲಕರ ರಿದಮಿಕ್ ಯೋಗದಲ್ಲಿ ದಿಗಂತ್ ನಾಯ್ಕ್ ಹಾಗೂ ನವೀನ್ ನಾಯ್ಕ್ ಪ್ರಥಮ ಸ್ಥಾನ ಪಡೆದರೆ, ಆರ್ಟಿಸ್ಟಿಕ್ ಯೋಗದಲ್ಲಿ ದಿಗಂತ್ ನಾಯ್ಕ್ ಹಾಗೂ ಮಧುಕೇಶ್ವರ ನಾಯ್ಕ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
14 ವರ್ಷ ವಯೋಮಿತಿಯೊಳಗಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲೂ ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ತನು ದೇವಾಡಿಗ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ, 100 ಮೀಟರ್ ಅಡೆತಡೆ ಓಟ ಹಾಗೂ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕರು ಹಾಗೂ ಬಾಲಕಿಯರ ರಿಲೇ ತಂಡಗಳು ದ್ವಿತೀಯ ಸ್ಥಾನ ಗಳಿಸಿವೆ. ದೀಪಾ ಮಡಿವಾಳ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, ವಿಠ್ಠಲ ಡೋಯಿಪಡೆ 200 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಹಾಗೂ ಜಾನು ಕೊಕ್ರೆ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕರು ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ತಂಡಗಳು ದ್ವಿತೀಯ ಸ್ಥಾನ ಪಡೆದಿದ್ದು, ಎರಡೂ ವಿಭಾಗಗಳಿಂದ ತಲಾ ಐವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಗತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಶಿಕ್ಷಕರ ಬಳಗ ಅಭಿನಂದನೆ ಸಲ್ಲಿಸಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಶುಭ ಹಾರೈಸಿದ್ದಾರೆ.


