Friday, October 23, 2026
HomeLocal Newsಸರ್ಕಾರಿ ಕೆಲಸಗಳ ಗೊಂದಲ ಪರಿಹಾರಕ್ಕೆ ಸಿದ್ದಾಪುರದಲ್ಲಿ ಹೊಸ ವಿಳಾಸ!

ಸರ್ಕಾರಿ ಕೆಲಸಗಳ ಗೊಂದಲ ಪರಿಹಾರಕ್ಕೆ ಸಿದ್ದಾಪುರದಲ್ಲಿ ಹೊಸ ವಿಳಾಸ!

ಶಿರಸಿ: ಸಾಮಾನ್ಯ ವ್ಯಕ್ತಿಯ ಸಣ್ಣ ಸಮಸ್ಯೆಗೂ ಎಲ್ಲಿಗೆ ಹೋಗಬೇಕು, ಯಾರನ್ನು ಸಂಪರ್ಕಿಸಬೇಕು ಎಂಬ ಗೊಂದಲ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಜನರಿಗೆ ಕೈಹಿಡಿದು ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಕೇಂದ್ರವನ್ನು ಆರಂಭಿಸಲಾಗಿದೆ. ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಲು ಸಾಧ್ಯವಾಗದಿದ್ದರೂ, ಪರಿಹಾರ ಸಿಗುವವರೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅನಂತಮೂರ್ತಿ ಹೆಗಡೆ ಹೇಳಿದರು.

ಸಿದ್ದಾಪುರದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಅನಂತ ಜನ ಸ್ಪಂದನ ಕೇಂದ್ರ’ ಆರಂಭಿಸಲಾಗಿದೆ. ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳ ಕೊರತೆ, ಅರ್ಜಿ ಸಲ್ಲಿಸುವಲ್ಲಿನ ಗೊಂದಲ, ಯಾವ ಕಚೇರಿಗೆ ತೆರಳಬೇಕು ಎಂಬ ಮಾಹಿತಿ ಇಲ್ಲದೆ ಕಚೇರಿಯಿಂದ ಕಚೇರಿಗೆ ಅಲೆದಾಡುವ ಜನರಿಗೆ ಈ ಕೇಂದ್ರ ನೆರವಾಗಲಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶೇಷವಾಗಿ ಬಡವರು, ವೃದ್ಧರು ಹಾಗೂ ಗ್ರಾಮೀಣ ಭಾಗದ ಜನರಿಗೆ ಹಲವು ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯಿಂದ ಸೌಲಭ್ಯಗಳು ಕೈತಪ್ಪುತ್ತಿವೆ. ಕೆಲವರು ಮಧ್ಯವರ್ತಿಗಳ ಮೊರೆ ಹೋಗಿ ಹೆಚ್ಚುವರಿ ಹಣ ನೀಡಿ ವಂಚನೆಗೊಳಗಾಗುತ್ತಿರುವುದನ್ನು ತಪ್ಪಿಸುವ ಉದ್ದೇಶವೂ ಕೇಂದ್ರಕ್ಕಿದೆ. ವ್ಯಕ್ತಿಗತ ಸಮಸ್ಯೆಗಳ ಜೊತೆಗೆ ಗ್ರಾಮ ಅಥವಾ ಸಮುದಾಯದ ಸಮಸ್ಯೆಗಳಿಗೂ ಸಾಧ್ಯವಾದಷ್ಟು ಸ್ಪಂದಿಸಲಾಗುವುದು. ಯಾವುದೇ ಪಕ್ಷಪಾತವಿಲ್ಲದೆ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದರು.

ಮತದಾರರ ಗುರುತಿನ ಚೀಟಿ ಮುದ್ರಣ, ಉದ್ಯಮ ನೋಂದಣಿ, ಪಡಿತರ ಚೀಟಿ, ಆಧಾರ್ ಮುದ್ರಣ, ಇ-ಶ್ರಮ್ ಕಾರ್ಡ್, ವಿದ್ಯಾರ್ಥಿಗಳ ಬಸ್ ಪಾಸ್, ಸಂಧ್ಯಾ ಸುರಕ್ಷಾ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಯೋಜನೆ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಹಾಸ್ಟೆಲ್ ಹಾಗೂ ಕಾಲೇಜು ಅರ್ಜಿಗಳಂತಹ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ.

ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಆದಾಯ ಮತ್ತು ಆಸ್ತಿ ಪ್ರಮಾಣಪತ್ರ, ಅಂಗವಿಕಲರ ಪಿಂಚಣಿ, ಪ್ಯಾನ್ ಕಾರ್ಡ್ ತಿದ್ದುಪಡಿ ಸೇರಿದಂತೆ ಸರ್ಕಾರಿ ಶುಲ್ಕ ಪಾವತಿಸಬೇಕಾದ ಸೇವೆಗಳಿಗೂ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಸಾರ್ವಜನಿಕರಿಂದ ಯಾವುದೇ ಸೇವಾ ಶುಲ್ಕ ಪಡೆಯುವುದಿಲ್ಲ ಎಂದು ತಿಳಿಸಿದರು.

ದೊಡ್ಡ ಸಮಸ್ಯೆಗಳ ಕುರಿತು ನಡೆಯುವ ಪ್ರತಿಭಟನೆಗಳು ಗಮನ ಸೆಳೆಯುತ್ತವೆ. ಆದರೆ ಸಾಮಾನ್ಯ ವ್ಯಕ್ತಿಯ ದಿನನಿತ್ಯದ ಸಣ್ಣ ಸಮಸ್ಯೆ ಬಂದಾಗ ‘ಎಲ್ಲಿಗೆ ಹೋಗಬೇಕು?, ಯಾರನ್ನು ಸಂಪರ್ಕಿಸಬೇಕು?’ ಎಂಬ ಪ್ರಶ್ನೆ ಎದುರಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಜನರಿಗೆ ಅಗತ್ಯ ಮಾಹಿತಿ ನೀಡಿ, ಸಂಬಂಧಿಸಿದ ಇಲಾಖೆಯವರೆಗೆ ತಲುಪಿಸಲು ನೆರವಾಗುವ ವ್ಯವಸ್ಥೆ ಬೇಕು ಎಂಬ ಉದ್ದೇಶದಿಂದ ಕೇಂದ್ರವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುಭವಕ್ಕೆ ಅನುಗುಣವಾಗಿ ಮತ್ತಷ್ಟು ಸೇವೆಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದರು.

ಕೇಂದ್ರದ ಅಧಿಕೃತ ಉದ್ಘಾಟನೆಯನ್ನು ಮುಂದಿನ ದಿನಗಳಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ನೆರವೇರಿಸಲು ಉದ್ದೇಶಿಸಲಾಗಿದೆ. ತರಬೇತಿ ಪಡೆದ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ರಜೆ ದಿನಗಳನ್ನು ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಕೇಂದ್ರ ತೆರೆದಿರಲಿದೆ.

‘ಸಮಸ್ಯೆ ನಿಮ್ಮದು-ಪರಿಹಾರ ನೀಡುವ ಪ್ರಯತ್ನ ನಮ್ಮದು’ ಎಂಬ ಧ್ಯೇಯದೊಂದಿಗೆ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ತಿಮ್ಮಪ್ಪ ಎಂ.ಕೆ, ಪ್ರದೀಪ್ ಹೆಗಡೆ ಕರ್ಜಗಿ, ಅಣ್ಣಪ್ಪ ಹಸಲರ್ ಶಾನ್ ಬಾಳೆಗದ್ದೆ ಸೇರಿದಂತೆ ಟ್ರಸ್ಟ್‌ನ ಪ್ರಮುಖರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share