ಶಿರಸಿ: ರಾತ್ರಿ ಊಟಕ್ಕೆಂದು ಸ್ನೇಹಿತರೊಂದಿಗೆ ಹೊರಟಿದ್ದ ಯುವಕನಿಗೆ ಮಿರ್ಜಾನಕರ ಪೆಟ್ರೋಲ್ ಬಂಕ್ ಬಳಿ ಎದುರಾದ ವ್ಯಕ್ತಿಯೊಬ್ಬ, ಆತನನ್ನು ಅಡ್ಡಗಟ್ಟಿ ಜಾತಿ ನಿಂದನೆ ಮಾಡಿ ಬೈಕ್‌ನಿಂದ ತಳ್ಳಿ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಕೆ.ಇ.ಬಿ. ರಸ್ತೆ, ಮಾರುತಿಗಲ್ಲಿ ನಿವಾಸಿ ಆದರ್ಶ ಆನಂದ ಮರಾಠಿ, ಸೆ.25ರಂದು ರಾತ್ರಿ 10.45ರಿಂದ 11 ಗಂಟೆ ನಡುವಿನ ಅವಧಿಯಲ್ಲಿ ಸ್ನೇಹಿತರೊಂದಿಗೆ ಊಟಕ್ಕೆಂದು ಮಿರ್ಜಾನಕರ ಪೆಟ್ರೋಲ್ ಬಂಕ್ ಬಳಿ ಹೋಗುತ್ತಿದ್ದರು.
ಈ ವೇಳೆ ಗಿರೀಶ ವಾಮನ ನಾಯ್ಕ ಎಂಬಾತ ಅವರನ್ನು ಅಡ್ಡಗಟ್ಟಿ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದಿದ್ದಾನೆ. ಬಳಿಕ ಬೈಕ್‌ನಿಂದ ತಳ್ಳಿ, ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆದರ್ಶ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.
ದೂರಿನ ಆಧಾರದ ಮೇಲೆ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಪತ್ತೆಗಾಗಿ ಪೊಲೀಸ್ ತಂಡ ರಚಿಸಿ, ಖಚಿತವಾದ ಸ್ಥಳೀಯ ಹಾಗೂ ತಾಂತ್ರಿಕ ಮಾಹಿತಿಯನ್ನು ಆಧರಿಸಿ ಪೊಲೀಸರು ಕುಮಟಾದ ಗುಡೆಅಂಗಡಿ ನಿವಾಸಿ ಗಿರೀಶ್ ವಾಮನ ನಾಯ್ಕ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಚಾರಣೆ ಬಳಿಕ ಸೂಕ್ತ ರಿಮಾಂಡ್‌ನೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯ ಪತ್ತೆ ಕಾರ್ಯಾಚರಣೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಹಾಗೂ ಶಿರಸಿ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಈ.ಸಿ. ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಪಿಎಸ್‌ಐಗಳಾದ ನರಸಿಂಹಲು ಟಿ. ಹಾಗೂ ನಾರಾಯಣ ರಾಠೋಡ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಸವರಾಜ ಹಗರಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಹನುಮಂತ ಕಬಾಡಿ, ಚೆನ್ನಪ್ಪ, ಸುನೀಲ್, ಪ್ರಶಾಂತ ಹಾಗೂ ರಾಜಶೇಖರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಶಿರಸಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸಲಾಗಿದೆ.


