ಕಾರವಾರ: ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯ ಅಸ್ನೋಟಿ ಗ್ರಾಮದ ಭಗವತವಾಡದಲ್ಲಿ ನಡೆದ ಕತ್ತಿಯಿಂದ ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ ಬಾಳಾ ನಾಯ್ಕ (41) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸೆ.26ರಂದು ಸಂಜೆ 5.45ರ ಸುಮಾರಿಗೆ ಅಂಗಡಿ ಗ್ರಾಮದ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಸಂದರ್ಭದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನೊಬ್ಬ ಚೇಷ್ಟೆ ಮಾಡಿದ್ದ ಹಾಗೂ ಸಿದ್ದಾರ್ಥ ಸತೀಶ ಗೋಸಾವಿ ಅವರ ಸ್ನೇಹಿತ ಸಾಯಿಸನತ್ ಎಂಬಾತನೊಂದಿಗೆ ಜಗಳ ಮಾಡಿಕೊಂಡಿದ್ದ ವಿಚಾರವನ್ನು ಬಾಲಕನ ಪೋಷಕರಿಗೆ ತಿಳಿಸಿ ಬುದ್ಧಿವಾದ ಹೇಳುವ ಉದ್ದೇಶದಿಂದ ರೋಷನ್ ದೀಪಕ ನಾಯ್ಕ, ಸಿದ್ದಾರ್ಥ ಸತೀಶ ಗೋಸಾವಿ ಹಾಗೂ ಇತರರು ಅಸ್ನೋಟಿ ಗ್ರಾಮದ ಭಗವತವಾಡದಲ್ಲಿರುವ ಬಾಲಕನ ಮನೆಗೆ ತೆರಳಿದ್ದರು.
ಈ ವೇಳೆ ಬಾಲಕನ ತಂದೆ ದೀಪಕ ಬಾಳಾ ನಾಯ್ಕ ಹಾಗೂ ಬಾಲಕ ರೋಷನ್ ದೀಪಕ ನಾಯ್ಕ ಮತ್ತು ಸಿದ್ದಾರ್ಥ ಸತೀಶ ಗೋಸಾವಿ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ದೂರಿನ ಮೇರೆಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ಆರೋಪಿತ ದೀಪಕ ಬಾಳಾ ನಾಯ್ಕನನ್ನು ಸ್ಥಳೀಯ ಮಾಹಿತಿಯ ಆಧಾರದ ಮೇಲೆ ಸೆ.27ರಂದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನೂ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಆತನನ್ನು ಕಾನೂನು ಪ್ರಕಾರ ಬಾಲ ನ್ಯಾಯ ಮಂಡಳಿ (JJ Board) ಮುಂದೆ ಹಾಜರುಪಡಿಸಲಾಗಿದೆ.


