Thursday, October 22, 2026
HomeLocal Newsಉತ್ತರ ಕನ್ನಡ ಜಿಲ್ಲೆ ಯಾರಿಗೂ ಬೇಡವಾದ ಕೂಸು!

ಉತ್ತರ ಕನ್ನಡ ಜಿಲ್ಲೆ ಯಾರಿಗೂ ಬೇಡವಾದ ಕೂಸು!

ಸಿದ್ದಾಪುರ: ಗೆಜೆಟ್ ನೋಟಿಫಿಕೇಶನ್ ಆಗಿ ಒಂದು ವರ್ಷ ಕಳೆದರೂ ಸ್ಥಳೀಯ ಶಾಸಕರು ಮೌನವಾಗಿದ್ದಾರೆ. ಸಚಿವ ಮಂಕಾಳ ವೈದ್ಯರೂ ಈ ವಿಚಾರದಲ್ಲಿ ಸುಮ್ಮನಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆರೋಪಿಸಿದರು.

ತಾಲೂಕಿನ ಕಾನಸೂರು ಗ್ರಾಮ ಪಂಚಾಯಿತಿ ಎದುರು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ‘ನಮ್ಮ ಮನೆ ನಮ್ಮ ಹಕ್ಕು’ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತಪ್ಪು ಮಾಡಿದ್ದರೆ ಅದಕ್ಕೆ ಶಾಸಕರು ರಾಜೀನಾಮೆ ನೀಡಬೇಕೇ ಹೊರತು ಸಂಸದರು ರಾಜೀನಾಮೆ ನೀಡಬೇಕಿಲ್ಲ. ಆದರೆ ಸ್ಥಳೀಯ ಶಾಸಕರು ಅಸಹಾಯಕರಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಒಂದು ವೇಳೆ ಬಡವರ ಮನೆಗಳನ್ನು ಕೆಡವಲು ಮುಂದಾದರೆ ಭಾರತೀಯ ಜನತಾ ಪಾರ್ಟಿ ಸುಮ್ಮನಿರುವುದಿಲ್ಲ. ಬಡವರ ಮನೆ ಕೆಡವಿದರೆ ರಾಜೀನಾಮೆ ಕೊಡಿಸುವವರೆಗೆ ಹೋರಾಟ ನಡೆಸುತ್ತೇವೆ. ಬಿಜೆಪಿ ಯಾವಾಗಲೂ ಬಡವರ ಪರವಾಗಿ ನಿಲ್ಲುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ ಎಂದು ಆರೋಪಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ಮತದಾರರಾಗಿರುವ ಜನರು ಚುನಾವಣೆ ಮುಗಿದ ಬಳಿಕ ಅತಿಕ್ರಮಣದಾರರಾಗುತ್ತಾರೆ. ಬ್ರಿಟಿಷರಿಗಿಂತಲೂ ಕ್ರೂರತ್ವ ಕಾಂಗ್ರೆಸ್‌ನಲ್ಲಿದೆ ಎಂದು ಟೀಕಿಸಿದರು.

ಉತ್ತರ ಕನ್ನಡ ಜಿಲ್ಲೆ ಯಾರಿಗೂ ಬೇಡವಾದ ಕೂಸಾಗಿದೆ. ಯಾವುದೇ ಯೋಜನೆ ಬಂದರೂ ಮೊದಲು ನೆನಪಾಗುವುದು ಉತ್ತರ ಕನ್ನಡ ಜಿಲ್ಲೆ. ಬಿಜೆಪಿ ಕಾರ್ಯಕರ್ತರು ಹೇಡಿಗಳಲ್ಲ. 15 ದಿನಗಳ ಒಳಗೆ ಸರ್ಕಾರ ತನ್ನ ಆದೇಶವನ್ನು ವಾಪಸ್ ಪಡೆಯಬೇಕು. ಯಾವುದೇ ಬಡವನಿಗೂ ನೋಟಿಸ್ ಹೋಗದಂತೆ ನೋಡಿಕೊಳ್ಳಬೇಕು. ಆದೇಶವನ್ನು ವಾಪಸ್ ಪಡೆಯದಿದ್ದರೆ ಉಗ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಲರಾಮ ನಾಮಧಾರಿ, ಕೃಷ್ಣಮೂರ್ತಿ ಹೆಗಡೆ, ವಿನಾಯಕ ಹೆಗಡೆ, ಎನ್.ವಿ. ಹೆಗಡೆ, ಜಿ.ಜಿ. ದೇವಿಸರ, ನಾಗರಾಜ ಕರಮನೆ, ಗಣೇಶ ಕಾನಸೂರು, ಮನೋಜ್ ಕಾನಸೂರು, ಎನ್.ವಿ. ಹೆಗಡೆ ಮಾದನಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಳೆಯ ಕೊರತೆಯಿಂದ ಸಿದ್ದಾಪುರ ತಾಲೂಕಿನ ಹಲವು ಕಡೆ ಭತ್ತದ ಗದ್ದೆಗಳು ಒಣಗಿವೆ. ಆದರೆ ಸರ್ಕಾರ ಇದುವರೆಗೂ ಸಿದ್ದಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿಲ್ಲ ಎಂದು ಅನಂತಮೂರ್ತಿ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.

ಶಿರಸಿ–ಸಿದ್ದಾಪುರ ತಾಲೂಕುಗಳನ್ನು ಇನ್ನೂ ಬರಪೀಡಿತ ತಾಲೂಕು ಎಂದು ಏಕೆ ಘೋಷಣೆ ಮಾಡಿಲ್ಲ? ಶಾಸಕರು ನಿದ್ದೆಯಲ್ಲಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಬರಪೀಡಿತ ತಾಲೂಕಿನ ರೈತರಿಗೆ ರೂ.2,500 ಪರಿಹಾರ ನೀಡುವುದಾಗಿ ಹೇಳಲಾಗುತ್ತಿದೆ. ಈ ಮೊತ್ತದಿಂದ ರೈತರು ಬದುಕಲು ಸಾಧ್ಯವೇ ಎಂದು ಪ್ರಶ್ನಿಸಿದರು.

ರೈತರಿಗೆ ಕನಿಷ್ಠ ರೂ.25 ಸಾವಿರ ಪರಿಹಾರ ನೀಡಬೇಕು. ಸಿದ್ದಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share