ಯಲ್ಲಾಪುರ: ಸಂಬಂಧಿಕರ ನಡುವಿನ ವಿಚಾರಕ್ಕೆ ಸಂಬಂಧಿಸಿ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಇಬ್ಬರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರವತ್ತಿಯ ಇಂದಿರಾನಗರ ನಿವಾಸಿ, ಮೀನು ವ್ಯಾಪಾರಿ ಸುಭಾನಿ ಹುಸೇನಸಾಬ ಪೀರಾ (39) ಅವರು ನೀಡಿದ ದೂರಿನ ಆಧಾರದಲ್ಲಿ ಆಷ್ಪಾಕ ಭಾಷಾಸಾಬ ಬೇವಿನಮರ ಹಾಗೂ ಸುಭಾನಿ ಬಾಷಾಸಾಬ ಬೇವಿನಮರ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಆರೋಪಿತರು ಮತ್ತು ದೂರುದಾರರು ಸಂಬಂಧಿಕರಾಗಿದ್ದು, ದೂರುದಾರರು ತಮ್ಮ ಅಕ್ಕನೊಂದಿಗೆ ಜಗಳ ಮಾಡಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿತರು ತಪ್ಪಾಗಿ ತಿಳಿದುಕೊಂಡಿದ್ದರು ಎನ್ನಲಾಗಿದೆ.
ಸೆ.26ರಂದು ರಾತ್ರಿ ಸುಮಾರು 10.30ಕ್ಕೆ ಆರೋಪಿತರು ಇಬ್ಬರೂ ಸೇರಿ ದೂರುದಾರರ ಮನೆಯ ಹಾಲ್‌ಗೆ ಅಕ್ರಮವಾಗಿ ಪ್ರವೇಶಿಸಿ ಅವಾಚ್ಯವಾಗಿ ಬೈದಿದ್ದಾರೆ. ಈ ವೇಳೆ ಮೊದಲ ಆರೋಪಿ ಆಷ್ಪಾಕ ಭಾಷಾಸಾಬ ಬೇವಿನಮರ ದೂರುದಾರ ಸುಭಾನಿ ಹುಸೇನಸಾಬ ಪೀರಾ ಅವರನ್ನು ದೂಡಿ ಹಾಕಿದ್ದು, ತಪ್ಪಿಸಿಕೊಳ್ಳಲು ಮುಂದಾದಾಗ ಅವರ ಬಲಕೈ ಹಿಡಿದು ಕಚ್ಚಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಎರಡನೇ ಆರೋಪಿ ಸುಭಾನಿ ಬಾಷಾಸಾಬ ಬೇವಿನಮರ ದೂರುದಾರರ ಎಡಗಣ್ಣಿಗೆ ಹಾಗೂ ಎದೆಗೆ ಕೈಯಿಂದ ಹೊಡೆದು, ಕೈಯಲ್ಲಿದ್ದ ಬೈಕ್ ಚಾವಿಯಿಂದ ತಲೆಗೆ ಚುಚ್ಚಿದ್ದಾನೆ ಎನ್ನಲಾಗಿದೆ. ಇಬ್ಬರೂ ಸೇರಿ ಹಲ್ಲೆ ನಡೆಸಿದ ಪರಿಣಾಮ ಬಲಕೈ, ಮೂಗು, ಎದೆ ಹಾಗೂ ತಲೆಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಸ್ಥಳದಲ್ಲಿದ್ದ ದೂರುದಾರರ ಅಣ್ಣ ಹಾಗೂ ಅಣ್ಣನ ಪತ್ನಿ ಮಧ್ಯಪ್ರವೇಶಿಸಿ ಹಲ್ಲೆಯನ್ನು ಬಿಡಿಸಿದ್ದಾರೆ. ಬಳಿಕ ಆರೋಪಿತರು ದೂರುದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


