Friday, October 23, 2026
HomeCrimeಯಲ್ಲಾಪುರ | ಉಡ ಬೇಟೆ: ತಂದೆ–ಮಗನ ಬಂಧನ!

ಯಲ್ಲಾಪುರ | ಉಡ ಬೇಟೆ: ತಂದೆ–ಮಗನ ಬಂಧನ!

ಯಲ್ಲಾಪುರ: ವನ್ಯಪ್ರಾಣಿಯನ್ನು ಬೇಟೆಯಾಡಿ ಮನೆಯಲ್ಲಿ ದಾಸ್ತಾನು ಇರಿಸಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಎರಡು ಮೃತಪಟ್ಟ ಗಂಡು ಉಡಗಳು, ಬೇಟೆಗೆ ಬಳಸಿದ ಎರಡು ಕತ್ತಿಗಳು ಹಾಗೂ ಒಂದು ಕೊಡಲಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತಂದೆ–ಮಗನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸೆ.28ರಂದು ಯಲ್ಲಾಪುರ ವಲಯ ವ್ಯಾಪ್ತಿಯ ಹಳಬೈಲ್ ಶಾಖೆಯ ಅರಳಿಕೊಪ್ಪ ಗಸ್ತು ಬ್ಲಾಕ್‌ ಮತ್ತು ಕಂಪಾರ್ಟ್‌ಮೆಂಟ್ ನಂ. XXXII-16ರ ಕಣ್ಣಿಗೇರಿ ಗ್ರಾಮದ ಹಳಿಯಾಳ ಕ್ರಾಸ್ ಅರಣ್ಯ ಸರ್ವೆ ನಂ.12/*/ಅರಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಹಳಿಯಾಳ ಕ್ರಾಸ್, ಕಣ್ಣಿಗೇರಿ ಗ್ರಾಮದ ನಿವಾಸಿಗಳಾದ ಇನಾಸ್ ಬಸ್ಥ್ಯಾಂವ್ ಸಿದ್ದಿ (55) ಹಾಗೂ ಮಗ ಪ್ರಕಾಶ್ ಇನಾಸ್ ಸಿದ್ದಿ (27) ಅವರ ಮನೆಯಲ್ಲಿ ಯಾವುದೋ ವನ್ಯಪ್ರಾಣಿಯನ್ನು ಬೇಟೆಯಾಡಿ ದಾಸ್ತಾನು ಇರಿಸಿರುವ ಬಗ್ಗೆ ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಬಂದಿತ್ತು. ಇದರ ಆಧಾರದ ಮೇಲೆ ಇಲಾಖೆಯ ಸಿಬ್ಬಂದಿ ಮನೆಯ ಮೇಲೆ ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ Bengal Monitor Lizard (Varanus bengalensis) ಜಾತಿಗೆ ಸೇರಿದ ಮೃತಪಟ್ಟ ಎರಡು ಗಂಡು ಉಡಗಳು ಪತ್ತೆಯಾಗಿವೆ. ಅಲ್ಲದೆ ಬೇಟೆಗೆ ಬಳಸಿದ ಎರಡು ಕತ್ತಿಗಳು ಹಾಗೂ ಒಂದು ಕೊಡಲಿಯನ್ನು ಇಲಾಖಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಸೆಕ್ಷನ್ 2(16), 9, 39(a) ಹಾಗೂ 50ರ ಅಡಿಯಲ್ಲಿ ಉಲ್ಲಂಘನೆಗೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಲಾಗಿದೆ. ಬಳಿಕ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ್ ಅವರ ನೇತೃತ್ವದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹಿಮವತಿ ಭಟ್ಟ ಹಾಗೂ ಅರಣ್ಯಾಧಿಕಾರಿ ಮಂಜುನಾಥ್ ಎಚ್. ನಾಯ್ಕ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.

ಉಪ ವಲಯ ಅರಣ್ಯಾಧಿಕಾರಿಗಳಾದ ಸುಭಾಷ್ ಗಾಂವ್ಕರ್, ಶ್ರೀನಿವಾಸ್ ನಾಯ್ಕ, ಶ್ರೀಧರ್ ಸಜ್ಜನ್, ಶರಣಬಸು ದೇವರ, ಪ್ರಭಾಕರ ಬಗಲಿ, ಮಂಜುನಾಥ್ ಗರ್ಭಗುಡಿ, ದರ್ಶನ್ ವಿ.ಎಸ್. ಹಾಗೂ ಗಸ್ತು ಅರಣ್ಯ ಪಾಲಕರಾದ ಸತೀಶ್ ಕುಂಬಾರ, ಬಸವರಡ್ಡಿ ರಡ್ಡೇರ, ರಾಮು ಕೊಕ್ಕರೆ, ಶಾನವಾಜ್ ಮುಲ್ತಾನಿ, ಗೌಡಪ್ಪ ಗೌಡ ಸುಳ್ಳದ, ರಮೇಶ್ ಬಡಿಗೇರ್, ಲಕ್ಷ್ಮಣ ಪಮ್ಮಾರ್, ಪ್ರಶಾಂತ್ ತಳವಾರ್, ವಾಹನ ಚಾಲಕರಾದ ಮಂಜುನಾಥ್, ಪ್ರಶಾಂತ್ ಹಾಗೂ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share