ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯ ಶಟರ್‌ಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿದ ಕಳ್ಳರು ರೂ.63,920 ಮೌಲ್ಯದ ಮೊಬೈಲ್ ಪರಿಕರಗಳು ಹಾಗೂ ಹಳೆಯ ಮೊಬೈಲ್‌ಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಕರಗಿನಕೊಪ್ಪದ ಮೊಬೈಲ್ ಅಂಗಡಿ ವ್ಯಾಪಾರಿ ಲಕ್ಷ್ಮಣ ಶಿವಪ್ಪ ಲಮಾಣಿ ನೀಡಿದ ದೂರಿನ ಆಧಾರದಲ್ಲಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.27ರಂದು ಬೆಳಗಿನ ಜಾವ 3ರಿಂದ 3.40ರ ನಡುವಿನ ಅವಧಿಯಲ್ಲಿ ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶಿವು ಮೊಬೈಲ್ ಅಂಗಡಿಯ ಶಟರ್‌ಗೆ ಹಾಕಿದ್ದ ಬೀಗವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮುರಿದು ಕಳ್ಳರು ಅಂಗಡಿಯೊಳಗೆ ಪ್ರವೇಶಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಂಗಡಿಯಲ್ಲಿದ್ದ ಒಂದು ಸೆಲ್ಫಿ ಸ್ಟಿಕ್, ಎರಡು ಹೆಡ್‌ಫೋನ್‌ಗಳು, ಒಂದು ಐಟೆಲ್ ಕೀಪ್ಯಾಡ್ ಫೋನ್, ಎಂಟು ಡೆಮೋ ಸಿಮ್‌ಗಳು, ಏಳು ಮೆಮೊರಿ ಕಾರ್ಡ್‌ಗಳು, ಮೂರು ಪೆನ್‌ಡ್ರೈವ್‌ಗಳು, ಒಂದು ವಿವೋ ಚಾರ್ಜರ್, 20 ಕಾರ್ಡ್ ರೀಡರ್‌ಗಳು, ಎರಡು ಪವರ್ ಬ್ಯಾಂಕ್‌ಗಳು, ಮೂರು ಬ್ಲೂಟೂತ್ ಸ್ಪೀಕರ್‌ಗಳು, ಒಂದು ಜಿಯೋ ಕೀಪ್ಯಾಡ್ ಫೋನ್, ಮೂರು ಮೊಬೈಲ್ ಬ್ಯಾಕ್ ಕವರ್‌ಗಳು ಹಾಗೂ ವಿವಿಧ ಕಂಪನಿಗಳ ಐದು ಹಳೆಯ ಮೊಬೈಲ್‌ಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಳುವಾದ ವಸ್ತುಗಳ ಒಟ್ಟು ಅಂದಾಜು ಮೌಲ್ಯ ರೂ.63,920 ಎಂದು ತಿಳಿಸಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


