ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಐದು ವರ್ಷಗಳ ಹಿಂದೆ ಇ-ಕೆವೈಸಿ ಮಾಡಿಸಿಕೊಂಡಿರುವ 5,69,044 ಪಡಿತರಚೀಟಿ ಸದಸ್ಯರು ಇದೀಗ ಮತ್ತೊಮ್ಮೆ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
ಸೆ.27ರ ವೇಳೆಗೆ ಜಿಲ್ಲೆಯಲ್ಲಿ 2,44,930 ಫಲಾನುಭವಿಗಳು ಇ-ಕೆವೈಸಿ ಪೂರ್ಣಗೊಳಿಸಿದ್ದು, ಇನ್ನೂ 3,24,114 ಫಲಾನುಭವಿಗಳ ಇ-ಕೆವೈಸಿ ಬಾಕಿ ಉಳಿದಿದೆ. ಇ-ಕೆವೈಸಿ ಮಾಡಿಸಿಕೊಳ್ಳಲು ಈ ಹಿಂದೆ ಸೆ.30 ಕೊನೆಯ ದಿನಾಂಕ ನಿಗದಿಪಡಿಸಲಾಗಿತ್ತು. ಇದೀಗ ಈ ಅವಧಿಯನ್ನು ವಿಸ್ತರಿಸಿ ಅ.20ರವರೆಗೆ ಅವಕಾಶ ನೀಡಲಾಗಿದೆ.
ಕೊನೆಯ ದಿನಾಂಕದವರೆಗೆ ಕಾಯದೆ, ಪಡಿತರ ಚೀಟಿ ಸದಸ್ಯರು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗೆ ತೆರಳಿ ಉಚಿತವಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಇ-ಕೆವೈಸಿ ಮಾಡಿಸಿಕೊಳ್ಳದೆ ಬಾಕಿ ಉಳಿದಲ್ಲಿ, ಪಡಿತರ ಚೀಟಿ ಆಧಾರದ ಮೇಲೆ ಸರ್ಕಾರದಿಂದ ಪಡೆಯುತ್ತಿರುವ ವಿವಿಧ ಸೌಲಭ್ಯಗಳು ಮುಂದಿನ ದಿನಗಳಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಪ್ರಕ್ರಿಯೆಗೆ ಹಣ ಪಡೆದರೆ ಆಹಾರ ಇಲಾಖೆಯ ಗ್ರಾಹಕರ ಸಹಾಯವಾಣಿ 1967ಕ್ಕೆ ಅಥವಾ ಸಂಬಂಧಪಟ್ಟ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರರು ಹಾಗೂ ಆಹಾರ ನಿರೀಕ್ಷಕರಿಗೆ ದೂರು ಸಲ್ಲಿಸುವಂತೆ ತಿಳಿಸಲಾಗಿದೆ.


