ಕಾರವಾರ: ಕರ್ನಾಟಕ ಲೋಕಾಯುಕ್ತದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸೆ.30ರಂದು ಕಾರವಾರದ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಸಾರ್ವಜನಿಕ ದೂರುಗಳ ವಿಚಾರಣೆ ನಡೆಸಲಿದ್ದಾರೆ.
ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ವಿಚಾರಣೆ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಹಾಗೂ ಉಪಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುವ ತನಿಖೆ ಮತ್ತು ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸಲಾಗುತ್ತದೆ.
ಈಗಾಗಲೇ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಿಸಿರುವ ದೂರುದಾರರು ನಿಗದಿತ ಸಮಯದಲ್ಲಿ ಹಾಜರಾಗಿ ವಿಚಾರಣೆಯ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಲೋಕಾಯುಕ್ತದ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


