ಯಲ್ಲಾಪುರ: ನಾಲ್ಕು ದಶಕಗಳಿಂದಲೂ ಕಲಾ-ಸಂಸ್ಕೃತಿಯ ಸೊಗಡನ್ನು ಹೊತ್ತು ನಿರಂತರವಾಗಿ ನಡೆದುಬರುತ್ತಿರುವ ‘ಸಂಕಲ್ಪ ಉತ್ಸವ’ಕ್ಕೆ ಯಲ್ಲಾಪುರ ಮತ್ತೆ ಸಜ್ಜಾಗಿದೆ. ಪ್ರತೀ ವರ್ಷ ಕಲಾಸಕ್ತರು ಕಾತರದಿಂದ ಕಾಯುವ ಈ ಸಂಸ್ಕೃತಿ ಸುಗ್ಗಿಯ ಹಬ್ಬ, ಈ ಬಾರಿ ನವೆಂಬರ್ 1ರಿಂದ 5ರವರೆಗೆ ಪಟ್ಟಣದ ಗಾಂಧಿ ಕುಟೀರದಲ್ಲಿ 40ನೇ ವರ್ಷದ ಸಂಭ್ರಮವಾಗಿ ನಡೆಯಲಿದೆ ಎಂದು ಸಂಕಲ್ಪ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ತಿಳಿಸಿದರು.
ಗುರುವಾರ ಯಲ್ಲಾಪುರದಲ್ಲಿ ಸಂಕಲ್ಪ ಉತ್ಸವದ ಪದಾಧಿಕಾರಿಗಳೊಂದಿಗೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಬಾರಿ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಪ್ರತಿದಿನವೂ ಅವರ ಸಂಸ್ಮರಣೆ ನಡೆಯಲಿದೆ. ವಿವಿಧ ಮಠಾಧೀಶರು ಹಾಗೂ ವಿವಿಧ ಕ್ಷೇತ್ರಗಳ ಸಾಧಕ ಗಣ್ಯರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಉತ್ಸವದಲ್ಲಿ ಭಗವದ್ಗೀತಾ ಪಠಣ, ಸಂಕಲ್ಪ ಪ್ರಶಸ್ತಿ ಪ್ರದಾನ, ತಾಳಮದ್ದಳೆ, ಸಿತಾರ್ ವಾದನ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಭಜನೆ, ಕೀರ್ತನೆ, ಯಕ್ಷನೃತ್ಯ, ಗಾನವೈಭವ ಹಾಗೂ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಬಾರಿ ವಿಶೇಷವಾಗಿ ‘ಸ್ವದೇಶಿ ಗೋ ಸಂಕಲ್ಪ’ ಉತ್ಸವ ಆಯೋಜಿಸಲಾಗಿದ್ದು, ಗೋವಿನ ಪಾಲನೆ, ಗೋ ಚಿಕಿತ್ಸೆ, ಗೋ ವೈಭವ, ಗೋ ಜೈವಿಕ ಕೃಷಿ, ಗೋ ಸಂಪನ್ಮೂಲಗಳ ನಿರ್ವಹಣೆ ಹಾಗೂ ಗವ್ಯೋತ್ಪನ್ನಗಳ ಮಾರಾಟ ಮತ್ತು ಸದ್ಬಳಕೆ ಕುರಿತು ಉಪನ್ಯಾಸಗಳು ನಡೆಯಲಿವೆ. ಇದರೊಂದಿಗೆ ಗವ್ಯೋತ್ಪನ್ನ ವಸ್ತುಗಳ ತಯಾರಿಕಾ ಪ್ರಶಿಕ್ಷಣವೂ ನಡೆಯಲಿದೆ ಎಂದು ತಿಳಿಸಿದರು.
ನ.1ರಂದು ಸ್ವರ್ಣವಲ್ಲೀ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ. ನ.2ರಂದು ನೆಲೆಮಾವು ಮಠದ ಶ್ರೀಮದ್ ಮಾಧವಾನಂದ ಭಾರತೀ ಸ್ವಾಮೀಜಿ ಹಾಗೂ ಶ್ರೀಕ್ಷೇತ್ರ ಬಂಗಾರಮಕ್ಕಿಯ ಮಾರುತಿ ಗುರೂಜಿ ಭಾಗವಹಿಸಲಿದ್ದಾರೆ.
ನ.3ರಂದು ಬಾರಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಡಾ. ವಿಶ್ವಸಂತೋಷ ಭಾರತೀ ಶ್ರೀಪಾದರು ಉಪಸ್ಥಿತರಿರುವರು. ನ.4ರಂದು ಎಡನೀರು ಮಠದ ಶ್ರೀಮದ್ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭಾಗವಹಿಸಲಿದ್ದು, ನ.5ರಂದು ನಡೆಯುವ ಉತ್ಸವದ ಸಮಾರೋಪ ಸಮಾರಂಭದಲ್ಲಿ ರಾಮಚಂದ್ರಾಪುರ ಮಠದ ಶ್ರೀಮದ್ ರಾಘವೇಶ್ವರ ಭಾರತೀ ಸ್ವಾಮೀಜಿ ಉಪಸ್ಥಿತರಿರುವರು.
ಉತ್ಸವದ ಅಂಗವಾಗಿ ನ.1ರಂದು ‘ಭಕ್ತಪ್ರಹ್ಲಾದ’, ನ.2ರಂದು ‘ಕಂಸ ದಿಗ್ವಿಜಯ, ಕಂಸವಧೆ’, ನ.3ರಂದು ‘ವೀರ ಬರ್ಭರೀಕ, ಚಕ್ರಚಂಡಿಕೆ’, ನ.4ರಂದು ‘ನಾಗನಂದನೆ’ ಹಾಗೂ ನ.5ರಂದು ‘ಗಾನವೈಭವ, ಭಾರ್ಗವ ವಿಜಯ’ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಉತ್ಸವದ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಘಟಕರಾದ ಸಿ.ಜಿ. ಹೆಗಡೆ, ಪ್ರಶಾಂತ ಹೆಗಡೆ, ಶ್ರೀಪಾದ ಭಟ್ಟ, ಬಾಬು ಬಾಂದೇಕರ, ಗೋಪಣ್ಣ ತಾರಿಮಕ್ಕಿ, ನರಸಿಂಹ ತಾಳಗುಪ್ಪ, ಪ್ರದೀಪ ಯಲ್ಲಾಪುರಕರ್, ರವಿ ದೇವಾಡಿಗ, ಶಿವು ಆಗೇರ ಇದ್ದರು.


