ಶಾಸಕ ಶಿವರಾಮ ಹೆಬ್ಬಾರ್ ವಿರುದ್ಧದ ಹೇಳಿಕೆಗಳಿಗೆ ಕಾಂಗ್ರೆಸ್ ತಿರುಗೇಟು
ಯಲ್ಲಾಪುರ: ಬೇರೆ ಪಕ್ಷದಲ್ಲಿರುವಾಗ ಜನಪ್ರತಿನಿಧಿಗಳನ್ನು ಟೀಕಿಸಿ, ಬಿಜೆಪಿಗೆ ಬಂದ ಬಳಿಕ ಅವರನ್ನು ಸ್ವಚ್ಛರೆಂದು ಬಿಂಬಿಸುವ ಬಿಜೆಪಿಯ ಧೋರಣೆ ವಾಷಿಂಗ್ ಮಷಿನ್ ರಾಜಕಾರಣವನ್ನು ನೆನಪಿಸುತ್ತದೆ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ ಹೇಳಿದ್ದಾರೆ.
ಪಟ್ಟಣದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ಐದು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಶಾಸಕರ ಹುದ್ದೆಗೆ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿರುವುದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರ ಹತಾಶೆಯ ಪ್ರತೀಕ ಎಂದು ಆರೋಪಿಸಿದರು.
ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಪರಮಪೂಜ್ಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ಸಮ್ಮುಖದಲ್ಲಿ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮಠದ ಕಾರ್ಯಚಟುವಟಿಕೆಗಳಿಗೆ ಹಾಗೂ ಯೋಜನೆಗೆ ಶಾಸಕರು ಎಲ್ಲ ರೀತಿಯ ಸಹಕಾರ ನೀಡುತ್ತಿರುವುದು ಸ್ವಾಮೀಜಿಗಳಿಗೂ ತಿಳಿದಿದೆ. ಹೀಗಾಗಿ ಈ ವಿಚಾರದಲ್ಲಿ ಬಿಜೆಪಿ ಮುಖಂಡರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಪ್ರತಿಭಟನೆಗಳ ಮೂಲಕ ತಾಲೂಕಿನ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿರುವ ವಿ.ಎಸ್. ಭಟ್, ರಾಜ್ಯ ಹೆದ್ದಾರಿಗಾಗಿ ಪ್ರತಿಭಟನೆ ನಡೆಸುವವರು ರಾಷ್ಟ್ರೀಯ ಹೆದ್ದಾರಿ-52ರ ದುಸ್ಥಿತಿಯ ಬಗ್ಗೆಯೂ ಗಮನಹರಿಸಬೇಕು. ಹೆದ್ದಾರಿಯಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಜೀವ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡರು ಹಾಗೂ ಸಂಸದರ ನಿಲುವೇನು ಎಂದು ಪ್ರಶ್ನಿಸಿದರು.
ತಾಲೂಕಿನ ದೇಹಳ್ಳಿ-ಮೆಣಸುಮನೆ ಸಮೀಪದ ಬಿಎಸ್‌ಎನ್‌ಎಲ್ ಮೊಬೈಲ್ ಟವರ್‌ಗಳು ಹಲವು ವರ್ಷಗಳಿಂದ ಸಂಪರ್ಕ ಕಲ್ಪಿಸದೆ ಇರುವುದಕ್ಕೂ ಉತ್ತರ ನೀಡಬೇಕು. ಯಲ್ಲಾಪುರ ಪಟ್ಟಣದಲ್ಲಿ ಶಾಸಕರ ಪ್ರಯತ್ನದಿಂದ ನಿರ್ಮಾಣವಾಗಿರುವ ಉನ್ನತೀಕರಿಸಿದ ವಸತಿ ಯೋಜನೆಯ ಮನೆಗಳು ರಾಜ್ಯದಲ್ಲೇ ಸುರಕ್ಷಿತ ಹಾಗೂ ಸುಂದರವಾಗಿವೆ ಎಂದು ಹೇಳಿದ ಅವರು, ಪಕ್ಕದ ಶಿರಸಿ ಕ್ಷೇತ್ರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಾಗಿದ್ದ ಅವಧಿಯಲ್ಲಿ ನಿರ್ಮಿಸಲಾದ ಮನೆಗಳ ಸ್ಥಿತಿಗತಿಯನ್ನು ಪರಿಶೀಲಿಸುವಂತೆ ಸವಾಲು ಹಾಕಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಸುತ್ತೋಲೆಯಲ್ಲಿ ಅರಣ್ಯ ಅತಿಕ್ರಮಣದಾರರ ಮನೆಗಳಿಗೆ ಸಂಬಂಧಿಸಿದ ನಿರ್ಬಂಧಗಳ ತಿದ್ದುಪಡಿಗಾಗಿ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಭೀಮಣ್ಣ ನಾಯ್ಕ ಅವರು ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅತಿಕ್ರಮಣ ಪ್ರದೇಶದಲ್ಲಿ ಮನೆ ಹೊಂದಿರುವವರಿಗೆ ಅನುಕೂಲವಾಗುವ ಪೂರಕ ಸುತ್ತೋಲೆ ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ. ಅತಿಕ್ರಮಣದಾರರ ಪರವಾಗಿ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರು ಸದಾ ಇರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ಶಾಸಕ ಶಿವರಾಮ ಹೆಬ್ಬಾರ್ ಅವರು ಸಂಘಟನೆ ಹಾಗೂ ಪರಿಶ್ರಮದ ಮೂಲಕ ಜನಪ್ರತಿನಿಧಿಯಾಗಿ ಬೆಳೆದಿದ್ದು, ಇತರರು ನಿರ್ಮಿಸಿದ ರಾಜಕೀಯ ಸಾಮ್ರಾಜ್ಯದಲ್ಲಿ ಸ್ವಯಂಘೋಷಿತ ನಾಯಕರಾಗಿಲ್ಲ. ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಯಲ್ಲಾಪುರ ತಾಲ್ಲೂಕನ್ನು ಮೊದಲ ಹಂತದಲ್ಲೇ ಬರಪೀಡಿತ ತಾಲೂಕೆಂದು ಘೋಷಿಸಲಾಗಿದ್ದು, ನೀರಾವರಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಗೋಡ ಏತ ನೀರಾವರಿ, ಕಂಪ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಳ್ಳಿ ಏತ ನೀರಾವರಿ, ಕೆರೆಹೊಸಳ್ಳಿ ಹಾಗೂ ಕಂಚನಳ್ಳಿ ಏತ ನೀರಾವರಿ ಯೋಜನೆಗಳು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಿವೆ. ಯಲ್ಲಾಪುರ ಪಟ್ಟಣಕ್ಕೆ ಅಂಬಿಕಾನಗರ (ಗಣೇಶಗುಡಿ) ನದಿಯಿಂದ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಯೂ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಹಿರಿಯ ಮುಖಂಡ ಎನ್.ಕೆ. ಭಟ್ಟ ಮಾತನಾಡಿ, ಎಸ್‌ಐಆರ್ ಬಗ್ಗೆ ಹಲವು ದಿನಗಳಿಂದಲೂ ಚರ್ಚೆಯಾಗುತ್ತಿದೆ. ವಿಶೇಷವಾಗಿ ಕಮಿಟಿಯವರ ನಡುವೆಯೇ ಒಗ್ಗಟ್ಟಿಲ್ಲ. ರಾಷ್ಟ್ರ ಮಟ್ಟದಲ್ಲಿ ಇಡೀ ವ್ಯವಸ್ಥೆ ಹದಗೆಟ್ಟಿದೆ. ಫಾರಂ ನಂ.7ನ್ನು ಕಾರ್ಯಕರ್ತರ ಕೈಗೆ ಕೊಟ್ಟು ಒತ್ತಾಯದಿಂದ ತಮಗೆ ಬೇಡವಾದ ವರ್ಗದವರ ಹೆಸರನ್ನು ಕಡಿಮೆ ಮಾಡಲು ಮುಂದಾಗಿರುವ ವಿಚಾರ ಪಕ್ಷದ ಗಮನಕ್ಕೆ ಬಂದಿದೆ ಎಂದು ಆರೋಪಿಸಿದರಲ್ಲದೆ, ಸ್ಥಳೀಯವಾಗಿಯೂ ಇಂತಹ ಘಟನೆಗಳು ನಡೆಯುವ ಸಾಧ್ಯತೆಯಿದ್ದು, ನಮ್ಮ ಪಕ್ಷದ ಕಾರ್ಯಕರ್ತರು ಕಣ್ಣಿಟ್ಟಿದ್ದಾರೆ ಎಂದರು.
ಉಲ್ಲಾಸ ಶಾನಭಾಗ ಮಾತನಾಡಿ, ಜಿಲ್ಲೆಯಲ್ಲಿ ಯುವನಿಧಿ ಯೋಜನೆಯ ಬಗ್ಗೆ ಮಾತುಗಳಿವೆ. ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಜನಸಂಖ್ಯೆ ಕಡಿಮೆ ಇದೆ. ಅಲ್ಲದೆ, ನಮ್ಮ ಯುವಕರು ಉದ್ಯೋಗ ಇಲ್ಲವೆಂದು ಖಾಲಿ ಕೂರದೆ ಸಣ್ಣ ಸಂಬಳದ ಕೆಲಸಕ್ಕಾದರೂ ಸೇರಿಕೊಳ್ಳುತ್ತಾರೆ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೇರೆಡೆ ತೆರಳುತ್ತಾರೆ. ಈ ಹಿನ್ನೆಲೆಯಲ್ಲಿ ನಿಗದಿತ ಗುರಿ ತಲುಪಲಾಗಿಲ್ಲ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸತೀಶ ನಾಯ್ಕ, ಜಗನ್ನಾಥ ರೇವಣಕರ, ಅನಿಲ್ ಮರಾಠೆ,ಗಣೇಶ ಪಾಠಣಕರ, ಪೂಜಾ ನೇತ್ರಕರ, ಅಕ್ಷಯ ರೇವಣಕರ, ಸತೀಶ್ ನಾಯ್ಕ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.


