Thursday, October 22, 2026
HomeLocal Newsಭಟ್ಕಳ | ರಸ್ತೆ ಹೆಸರಿನಲ್ಲಿ ಕಾಡು ಕಡಿತಕ್ಕೆ ವಿರೋಧ

ಭಟ್ಕಳ | ರಸ್ತೆ ಹೆಸರಿನಲ್ಲಿ ಕಾಡು ಕಡಿತಕ್ಕೆ ವಿರೋಧ

ಭಟ್ಕಳ: ಈಗಾಗಲೇ ರಸ್ತೆ ಸಂಪರ್ಕವಿದ್ದರೂ ವೆಂಕಟಾಪುರದ ಸರ್ವೇ ನಂ.270ರಲ್ಲಿ ಮತ್ತೆ ಕಾಡು ಹಾಗೂ ಹಾಡಿ ಪ್ರದೇಶ ಕಡಿದು ರಸ್ತೆ ನಿರ್ಮಿಸಲು ಮುಂದಾಗಿರುವುದೇಕೆ ಎಂದು ಪ್ರಶ್ನಿಸಿರುವ ಮಾಸ್ತಪ್ಪ ನಾಯ್ಕ ಬಲಸೆ ಅಭಿಮಾನಿಗಳು, ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ಹಾಡಿ ಜಾಗ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಭಟ್ಕಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿರುವ ಅಭಿಮಾನಿಗಳು, ವೆಂಕಟಾಪುರ ಗ್ರಾಮೀಣ ಭಾಗದಲ್ಲಿ ಜನರ ಸಂಚಾರಕ್ಕೆ ಈಗಾಗಲೇ ರಸ್ತೆ ಸಂಪರ್ಕವಿದೆ. ಹೀಗಿರುವಾಗ ಮತ್ತಷ್ಟು ಪ್ರಮಾಣದಲ್ಲಿ ಕಾಡು ಹಾಗೂ ಹಾಡಿ ಪ್ರದೇಶವನ್ನು ಕಡಿದು ಹೊಸ ರಸ್ತೆ ನಿರ್ಮಿಸುವ ಅಗತ್ಯವೇನು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜಕಾರಣಿಗಳು ಅಥವಾ ಪ್ರಭಾವಿ ವ್ಯಕ್ತಿಗಳ ವೈಯಕ್ತಿಕ ಅಭಿವೃದ್ಧಿಗೆ ಅನುಕೂಲವಾಗುವ ಕಾಮಗಾರಿಗಳಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವ ಬದಲು, ಹಾಡಿ ಪ್ರದೇಶವನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಬಡ ಹಾಗೂ ಸಾಮಾನ್ಯ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಡಳಿತ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.

ಈ ಭಾಗದ ಬಡ ಕುಟುಂಬಗಳಿಗೆ ಕುಡಿಯುವ ನೀರು, ಉತ್ತಮ ರಸ್ತೆ, ವಿದ್ಯುತ್, ಚರಂಡಿ, ಆರೋಗ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವತ್ತ ಅಧಿಕಾರಿಗಳು ಗಮನಹರಿಸಬೇಕು. ಅಲ್ಲದೆ, ಶ್ರೀಮಂತರು ಹಾಗೂ ರಾಜಕೀಯ ಪ್ರಭಾವ ಹೊಂದಿರುವವರಿಗೆ ಮಾತ್ರ ಹಾಡಿ ಅಥವಾ ಅರಣ್ಯ ಪ್ರದೇಶದಲ್ಲಿ ಒತ್ತುವರಿ ಹಾಗೂ ಕಾಮಗಾರಿಗಳಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಸಾರ್ವಜನಿಕರಲ್ಲಿರುವ ಅನುಮಾನವನ್ನು ಅಧಿಕಾರಿಗಳು ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ವೇ ನಂ.270ಕ್ಕೆ ಸಂಬಂಧಿಸಿದ ದಾಖಲೆಗಳು, ಜಾಗದ ಸ್ವರೂಪ, ರಸ್ತೆ ನಿರ್ಮಾಣಕ್ಕೆ ಪಡೆದಿರುವ ಅನುಮತಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಪರವಾನಗಿಗಳನ್ನು ಪರಿಶೀಲಿಸಬೇಕು. ನಿಯಮಬಾಹಿರ ಕಾಮಗಾರಿ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಮತ್ತು ಹಾಡಿ ಪ್ರದೇಶ ನಾಶ ಮಾಡುವ ಬದಲು, ಈಗಿರುವ ರಸ್ತೆ ಹಾಗೂ ಮೂಲಸೌಕರ್ಯಗಳನ್ನು ಸುಧಾರಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ನೈಸರ್ಗಿಕ ಸಂಪತ್ತಿನ ಸಂರಕ್ಷಣೆಯ ಜತೆಗೆ ಹಾಡಿ ಜಾಗವನ್ನು ಅವಲಂಬಿಸಿರುವ ಬಡ ಜನರ ಜೀವನೋಪಾಯವನ್ನೂ ರಕ್ಷಿಸಬೇಕು ಎಂದು ಮಾಸ್ತಪ್ಪ ನಾಯ್ಕ ಬಲಸೆ ಅಭಿಮಾನಿಗಳು ಮನವಿಯಲ್ಲಿ ವಿನಂತಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share