ಮುರ್ಡೇಶ್ವರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬದಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ರೂ.13.50 ಲಕ್ಷ ಮೌಲ್ಯದ ಚಿನ್ನಾಭರಣ, ರೂ.1 ಲಕ್ಷ ಮೌಲ್ಯದ ಬೆಳ್ಳಿ ತಂಬಿಗೆ ಹಾಗೂ ರೂ.3 ಲಕ್ಷ ನಗದು ಕಳವು ಮಾಡಿರುವ ಘಟನೆ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭಟ್ಕಳ ತಾಲೂಕಿನ ಕಾಯ್ಕಿಣಿ ಗ್ರಾಮದ ಅಗ್ಲೊಳೆ, ಕೊಟದಮಕ್ಕಿ ರಸ್ತೆ ನಿವಾಸಿ, ಉಪನ್ಯಾಸಕ ರಾಜೇಶ ಕುಪ್ಪಯ್ಯ ಶೆಟ್ಟಿ (54) ನೀಡಿದ ದೂರಿನ ಆಧಾರದಲ್ಲಿ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ರಾಜೇಶ ಶೆಟ್ಟಿ ಅವರು ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು, ಅ.1ರಂದು ಬೆಳಗ್ಗೆ 8.45ರ ಸುಮಾರಿಗೆ ಪತ್ನಿಯೊಂದಿಗೆ ಕಾಲೇಜಿಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಬೆಳಗ್ಗೆ 8.45ರಿಂದ 11.55ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಹಿಂಬದಿಯ ಬಾಗಿಲನ್ನು ಗಟ್ಟಿಯಾದ ಆಯುಧದಿಂದ ಮುರಿದು ಒಳನುಗ್ಗಿದ್ದಾರೆ.
ಬಳಿಕ ಮಲಗುವ ಕೋಣೆಯಲ್ಲಿದ್ದ ಕಪಾಟಿನ ಬಾಗಿಲನ್ನೂ ಮುರಿದ ಕಳ್ಳರು, ಅದರಲ್ಲಿದ್ದ ಅಂದಾಜು ರೂ.13.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಮತ್ತೊಂದು ಕಪಾಟಿನಲ್ಲಿದ್ದ ರೂ.3 ಲಕ್ಷ ನಗದನ್ನು ಕಳವು ಮಾಡಿದ್ದಾರೆ. ಅಲ್ಲದೆ, ರೂ.1 ಲಕ್ಷ ಮೌಲ್ಯದ ಬೆಳ್ಳಿ ತಂಬಿಗೆಯನ್ನೂ ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಒಟ್ಟು ರೂ.17.50 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು ಹಾಗೂ ನಗದು ಕಳವು ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


