ಯಲ್ಲಾಪುರ: ಗಾಂಜಾ ಮಾದಕ ವಸ್ತು ಸೇವನೆ ಮಾಡಿರುವ ಆರೋಪದಡಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಇಬ್ಬರು ಯುವಕರ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮೊದಲ ಪ್ರಕರಣದಲ್ಲಿ ಹೊಸಳ್ಳಿ, ಕಿರವತ್ತಿ ನಿವಾಸಿ ಕೃಷ್ಣಾ ವಿಠ್ಠಲ್ ಕಾಂಬಳೆ (22) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಅ.1ರಂದು ರಾತ್ರಿ 7.45ರ ಸುಮಾರಿಗೆ ಯಲ್ಲಾಪುರ ಪಟ್ಟಣದ ಜೋಡುಕೆರೆ ಕ್ರಾಸ್ ಬಳಿಯ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡಿರುವ ಅಮಲಿನಲ್ಲಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಜಶೇಖರ ವಂದಲಿ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವೈದ್ಯಾಧಿಕಾರಿಗಳ ವರದಿಯಲ್ಲಿ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದೇ ದಿನ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ಹೊಸಳ್ಳಿ ನಿವಾಸಿ ಮಹೇಶ ಲಕ್ಕು ಪೊಂಡೆ (23) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಅ.1ರಂದು ರಾತ್ರಿ 8.30ರ ಸುಮಾರಿಗೆ ಯಲ್ಲಾಪುರ ಪಟ್ಟಣದ ಪಿಡಬ್ಲ್ಯೂಡಿ ಪಾರ್ಕ್ ಮುಂದಿನ ಐ.ಬಿ. ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿರುವ ಅಮಲಿನಲ್ಲಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುರೇಶ ಜಿ. ಕುಂಬಾರ ಅವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವೈದ್ಯಾಧಿಕಾರಿಗಳ ವರದಿಯಲ್ಲಿ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ತಿಳಿಸಲಾಗಿದೆ. ಈ ಪ್ರಕರಣದಲ್ಲೂ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.