Thursday, October 22, 2026
HomeCrimeನಾಗರಮಡಿ ಫಾಲ್ಸ್‌ನಲ್ಲಿ ಬಾಟಲಿ ಕಿರಿಕ್: ದೂರು-ಪ್ರತಿದೂರು

ನಾಗರಮಡಿ ಫಾಲ್ಸ್‌ನಲ್ಲಿ ಬಾಟಲಿ ಕಿರಿಕ್: ದೂರು-ಪ್ರತಿದೂರು

ಕಾರವಾರ: ನಾಗರಮಡಿ ಫಾಲ್ಸ್‌ನಲ್ಲಿ ಬಾಟಲಿ ಎಸೆದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಧಾರವಾಡದಿಂದ ಪ್ರವಾಸಕ್ಕೆ ಬಂದಿದ್ದವರ ನಡುವೆ ಗಲಾಟೆ ನಡೆದಿದ್ದು, ಎರಡೂ ಕಡೆಯವರು ಪರಸ್ಪರ ಹಲ್ಲೆ ಆರೋಪಿಸಿ ದೂರು ನೀಡಿದ್ದಾರೆ.

ಕಾರವಾರದ ಅಮದಳ್ಳಿ ನಿವಾಸಿ, ಇಂಡಿಯನ್ ನೇವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಂದೇಶ ಮಾರುತಿ ಕೊಳಂಬಕರ ನೀಡಿದ ದೂರಿನ ಪ್ರಕಾರ, ಅ.2ರಂದು ಸಂಜೆ ಸುಮಾರು 5 ಗಂಟೆಗೆ ಸರ್ವೇಶ ಸೀತಾರಾಮ ಚಿಂಚಣಕರ ಅವರೊಂದಿಗೆ ಚೆಂಡಿಯಾದ ನಾಗರಮಡಿ ಫಾಲ್ಸ್‌ಗೆ ತೆರಳಿದ್ದರು. ಅಲ್ಲಿ ಧಾರವಾಡದಿಂದ ಬಂದಿದ್ದ ಸುಮಾರು 14–15 ಮಂದಿ ಫಾಲ್ಸ್‌ನ ನೀರಿನಲ್ಲಿ ಬಾಟಲಿಗಳನ್ನು ಎಸೆಯುತ್ತಿರುವುದನ್ನು ಗಮನಿಸಿ, ಇದು ಪ್ರವಾಸಿಗರು ಬರುವ ಸ್ಥಳವಾಗಿದ್ದು ಬಾಟಲಿ ಎಸೆಯದಂತೆ ತಿಳಿಸಿದ್ದಾರೆ.

ಈ ವೇಳೆ ಗುಂಪಿನಲ್ಲಿದ್ದ ಇಬ್ಬರು ವ್ಯಕ್ತಿಗಳು ‘ಅದನ್ನು ಹೇಳಲು ನೀನು ಯಾರು?’ ಎಂದು ಪ್ರಶ್ನಿಸಿ ಕೈಯಿಂದ ತಳ್ಳಿದ್ದು, ಬಳಿಕ ಎಲ್ಲರೂ ಸೇರಿಕೊಂಡು ನೆಲಕ್ಕೆ ಬೀಳಿಸಿ ಹೊಡೆದಿದ್ದಾರೆ ಎಂದು ಇಂದೇಶ ಆರೋಪಿಸಿದ್ದಾರೆ. ನಂತರ ಸುಮಾರು ಒಂದು ಕಿಲೋಮೀಟರ್ ಕೆಳಗೆ ಬಂದಾಗ, ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ತಮ್ಮ ಅಣ್ಣ ಆರೋಪಿಗಳು ಬಂದಿದ್ದ ವಾಹನವನ್ನು ನಿಲ್ಲಿಸಿದ್ದಾರೆ.

ಸಂಜೆ 5.30ರ ಸುಮಾರಿಗೆ ಅಲ್ಲಿಗೆ ತೆರಳಿದ್ದ ವೇಳೆ ಆರೋಪಿಗಳ ಪೈಕಿ ಒಬ್ಬರು ಕ್ರಿಕೆಟ್ ಬ್ಯಾಟ್‌ನಿಂದ ತಲೆಯ ಬಲಭಾಗಕ್ಕೆ ಹೊಡೆದಿದ್ದು, ಮತ್ತೊಬ್ಬರು ಮೂಗಿಗೆ ಗುದ್ದಿ ರಕ್ತಗಾಯ ಮಾಡಿದ್ದಾರೆ. ಜಗಳ ಬಿಡಿಸಲು ಬಂದ ತಮ್ಮ ಅಣ್ಣನನ್ನೂ ತಳ್ಳಿ ಟೀ-ಶರ್ಟ್ ಹರಿದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಧಾರವಾಡದ ಫತೆ ಅಹ್ಮದ ಡಂಬಲ್, ಮುಸ್ತಾಫಾ ಮಗ್ತುಮ್ ಶಿರಕೊಳ ಹಾಗೂ ಹೆಸರು-ವಿಳಾಸ ತಿಳಿಯದ ಇನ್ನೂ ಸುಮಾರು 13 ಮಂದಿಯ ವಿರುದ್ಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದರ ಬೆನ್ನಲ್ಲೇ ಧಾರವಾಡದ ಕೆಳಗೇರಿ, ಆಂಜನೇಯ ನಗರ ನಿವಾಸಿ ಫತೆ ಅಹ್ಮದ ಮಕ್ಬುಲ್ ಡಂಬಲ್ ಕೂಡ ಪ್ರತಿದೂರು ನೀಡಿದ್ದಾರೆ. ತಾವು ಧಾರವಾಡದ ಓಲ್ಡ್ ಗ್ರಾಸ್ ಮಾರ್ಕೆಟ್‌ನ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ರಜೆಯ ಹಿನ್ನೆಲೆಯಲ್ಲಿ ಅಂಗಡಿಯಲ್ಲಿ ಕೆಲಸ ಮಾಡುವ 17 ಮಂದಿ ಅಶೋಕ ಲೈಲ್ಯಾಂಡ್ ವಾಹನದಲ್ಲಿ ಅ.2ರಂದು ಬೆಳಗ್ಗೆ 11 ಗಂಟೆಗೆ ಧಾರವಾಡದಿಂದ ಹೊರಟು ಮಧ್ಯಾಹ್ನ ಸುಮಾರು 3.30ಕ್ಕೆ ನಾಗರಮಡಿ ಫಾಲ್ಸ್‌ಗೆ ಬಂದಿದ್ದೆವು. ಅಲ್ಲಿ ಊಟ ಮಾಡಿಕೊಂಡು ವಾಪಸ್ ತೆರಳುವಾಗ ಸ್ಥಳೀಯ ಇಬ್ಬರು ಬಾಟಲಿಗಳನ್ನು ಇಲ್ಲಿ ಎಸೆಯಬೇಡಿ ಎಂದು ಹೇಳಿ ಬೈದು, ಹೊಡೆಯಲು ಬಂದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಂತರ ತಮ್ಮ ವಾಹನದ ಬಳಿ ಬಂದಾಗ ಆ ಇಬ್ಬರು ಸ್ಥಳೀಯರೊಂದಿಗೆ ಇನ್ನಿಬ್ಬರು ಸೇರಿಕೊಂಡು ವಾಹನ ಅಡ್ಡಗಟ್ಟಿ, ಬೇರೆ ಊರಿನಿಂದ ಇಲ್ಲಿಗೆ ಯಾಕೆ ಬಂದಿದ್ದೀರಿ ಎಂದು ಕೆಟ್ಟದಾಗಿ ಬೈದು, ಹಲ್ಲೆ ನಡೆಸಿದ್ದಾರೆ ಎಂದು ಫತೆ ಅಹ್ಮದ ಆರೋಪಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಇಂದೇಶ ಮಾರುತಿ ಕೊಳಂಬಕರ, ಪ್ರಸಾದ ಮಾರುತಿ ಕೊಳಂಬಕರ, ಅಜಯ ಪಡ್ತಿ ಹಾಗೂ ಹೆಸರು-ವಿಳಾಸ ತಿಳಿಯದ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share