ಯಲ್ಲಾಪುರ: ಎರಡು ಬೈಕ್ಗಳ ನಡುವೆ ಸಂಭವಿಸಿದ ಅಘಾತದಲ್ಲಿ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ ಕಂಚಿನಮನೆ ಬಸ್ ನಿಲ್ದಾಣದ ಸಮೀಪ ನಡೆದಿದೆ.
ಅ.1ರಂದು ಮಧ್ಯಾಹ್ನ ಸುಮಾರು 1.50ರ ವೇಳೆಗೆ ಈ ಅಪಘಾತ ಸಂಭವಿಸಿದ್ದು, ಮಳವಳ್ಳಿ ಗ್ರಾಮದ ಅಳ್ಳೆಮನೆಯ 20 ವರ್ಷದ ವಿದ್ಯಾರ್ಥಿ ರವಿ ಸುಬ್ರಾಯ ಕುಣಬಿ ಬೈಕ್ ಚಲಾಯಿಸುತ್ತಿದ್ದ. ಬೈಕ್ನ ಹಿಂಬದಿಯಲ್ಲಿ ಯಲ್ಲಾಪುರದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಉಲ್ಲಾಸ ನಾಗೇಕರ ಅವರ ಪುತ್ರ ಸುಜಲ ಕುಳಿತಿದ್ದರು.
ನಂದೊಳ್ಳಿ ಕಡೆಯಿಂದ ಮತ್ತೊಂದು ಬೈಕ್ ಬರುತ್ತಿದ್ದ ವೇಳೆ ರವಿ ಚಲಾಯಿಸುತ್ತಿದ್ದ ಬೈಕ್ ರಸ್ತೆ ಬಲಭಾಗಕ್ಕೆ ಹೋಗಿ ಆ ಬೈಕ್ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಅಪಘಾತದ ಪರಿಣಾಮ ಸುಜಲ ಅವರ ಬಲಗಾಲಿನ ಮೊಣಕಾಲಿನ ಕೆಳಭಾಗಕ್ಕೆ ಗಂಭೀರ ಗಾಯವಾಗಿದ್ದು, ಕಾಲಿನ ಬೆರಳಿನ ಭಾಗದಲ್ಲೂ ಗಾಯವಾಗಿದೆ. ಅಪಘಾತದಲ್ಲಿ ಎರಡೂ ಬೈಕ್ಗಳು ಜಖಂಗೊಂಡಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೈಕ್ನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ, ಸುಜಲ ಅವರ ತಂದೆ ಉಲ್ಲಾಸ ಯಶವಂತ ನಾಗೇಕರ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಾಯಗೊಂಡಿರುವ ಸುಜಲ ಅವರಿಗೆ ಧಾರವಾಡದಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಮಗನಿಂದ ಘಟನೆಯ ಮಾಹಿತಿ ಪಡೆದುಕೊಂಡ ಬಳಿಕ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ರವಿ ಸುಬ್ರಾಯ ಕುಣಬಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


