ಶಿರಸಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಶಿರಸಿಯ ಮೆಕ್ಯಾನಿಕ್ ಪರಿಕ್ಷೀತ್ ಶ್ರೀನಿವಾಸ ಪತ್ತಾರ ವಿರುದ್ಧ ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಅ.3ರಂದು ಬೆಳಿಗ್ಗೆ 11.15ರ ಸುಮಾರಿಗೆ ಶಿರಸಿ ಕಾಲೇಜು ರಸ್ತೆಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಪರಿಕ್ಷೀತ್ ಗಾಂಜಾ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಪೊಲೀಸರಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯ ತನಿಖಾ ಪಿಎಸ್ಐ ಗೀತಾ ಕಲಘಟಗಿ ಅವರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಳಿಕ ಗಾಂಜಾ ಸೇವನೆ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಪಿಎಸ್ಐ ಗೀತಾ ಕಲಘಟಗಿ ಅವರು ಸರ್ಕಾರದ ಪರವಾಗಿ ದೂರು ನೀಡಿದ್ದು, ಅದರ ಆಧಾರದ ಮೇಲೆ ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


