ಕಾರವಾರ: ಅಂಗಡಿ ಎದುರು ನೀರು ಚೆಲ್ಲಿದ್ದನ್ನು ಪ್ರಶ್ನಿಸಿದ 69 ವರ್ಷದ ಮಹಿಳೆಯ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಆರೋಪದಡಿ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದಾಶಿವಗಡದ ಪ್ರೇಮಾ ನಾಯ್ಕ ಅವರು ನೀಡಿದ ದೂರಿನ ಆಧಾರದಲ್ಲಿ ದೇವಾವಾಡಾದ ಶ್ಯಾಮ ಪ್ರಭಾಕರ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಅ.4ರಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ಪ್ರೇಮಾ ನಾಯ್ಕ ಅವರು ತಮ್ಮ ಮಗಳ ಮಾಲೀಕತ್ವದ ಬಟ್ಟೆ ಅಂಗಡಿಯಲ್ಲಿ ಇದ್ದಾಗ, ಅಂಗಡಿಯ ಎದುರು ಆರೋಪಿ ನೀರು ಚೆಲ್ಲಿದ್ದಾನೆ ಎನ್ನಲಾಗಿದೆ. ಈ ಕುರಿತು ಪದೇಪದೆ ಪ್ರಶ್ನಿಸಿದಾಗ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆರೋಪಿ ಅವಾಚ್ಯವಾಗಿ ಮಾತನಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದಾದ ಬಳಿಕ ಅಂಗಡಿಯಲ್ಲಿದ್ದ ಸಣ್ಣ ಕಬ್ಬಿಣದ ರಾಡ್ವೊಂದನ್ನು ತೆಗೆದುಕೊಂಡು ಬಂದು ಪ್ರೇಮಾ ನಾಯ್ಕ ಅವರ ತಲೆಯ ಬಲಭಾಗಕ್ಕೆ ಹೊಡೆದು ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡ ಪ್ರೇಮಾ ನಾಯ್ಕ ಅವರು ಕಾರವಾರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಸ್ವಲ್ಪ ಚೇತರಿಸಿಕೊಂಡ ಬಳಿಕ ಅ.5ರಂದು ಚಿತ್ತಾಕುಲಾ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಚಿತ್ತಾಕುಲಾ ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.


