ಸಿದ್ದಾಪುರ: ಮನೆಯ ಬೀಗ ಮುರಿದು ನಗದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ, 24 ಗಂಟೆಯೊಳಗೆ ಅಂತರ ಜಿಲ್ಲಾ ಕಳ್ಳರ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ರೂ.330 ನಗದು ಹಾಗೂ ಸುಮಾರು ರೂ.2 ಲಕ್ಷ ಮೌಲ್ಯದ ಸುಜುಕಿ ಸ್ವಿಫ್ಟ್ ಡಿಜೈರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಸಿದ್ದಾಪುರ ತಾಲೂಕಿನ ಹಾಳದಕಟ್ಟಾದಲ್ಲಿ ಈ ಕಳ್ಳತನ ನಡೆದಿತ್ತು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತೊಗರ್ಸಿ ನಿವಾಸಿ ರಾಜು ಉಮೇಶ ಜಾಧವ್ ಅವರ ಮೂಲ ಮನೆಯಲ್ಲಿದ್ದ ವೃದ್ಧ ತಾಯಿ ಹಾಗೂ ಮಾನಸಿಕ ಅಸ್ವಸ್ಥ ಸಹೋದರನನ್ನು ಅ.3ರಂದು ತಮ್ಮೊಂದಿಗೆ ತೊಗರ್ಸಿಗೆ ಕರೆದೊಯ್ದಿದ್ದರು. ಸಂಜೆ 5 ಗಂಟೆ ಸುಮಾರಿಗೆ ಮನೆಯ ಬಾಗಿಲಿಗೆ ಬೀಗ ಹಾಕಿ ತೆರಳಿದ್ದರು.
ಅ.5ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಸ್ಥಳೀಯರು ಕರೆ ಮಾಡಿ ಮನೆಯ ಬಾಗಿಲು ತೆರೆದಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ರಾಜು ಅವರು ಸಿದ್ದಾಪುರಕ್ಕೆ ಬಂದು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಮುಂಭಾಗದ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಒಳನುಗ್ಗಿದ್ದ ಕಳ್ಳರು, ಕೋಣೆಯಲ್ಲಿದ್ದ ಗೋದ್ರೇಜ್‌ನ ಲಾಕನ್ನೂ ಮುರಿದು ಅದರಲ್ಲಿದ್ದ ರೂ.2,000 ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಕುರಿತು ರಾಜು ಅವರು ಅ.5ರಂದು ರಾತ್ರಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಶಿರಸಿ ಉಪವಿಭಾಗದ ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಸಿದ್ದಾಪುರ ಠಾಣೆಯ ಪಿಐ ಜೆ.ಬಿ. ಸೀತಾರಾಮ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ತನಿಖಾಧಿಕಾರಿ ಪಿಎಸ್‌ಐ ನಾಗಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡವು ಪ್ರಕರಣದ ಸುಳಿವು ಬೆನ್ನತ್ತಿ ಗದಗ ಜಿಲ್ಲೆಯ ಲಕ್ಷ್ಮೀಶ್ವರದ ಗೊವಿಂದಪ್ಪ ತೊಳೆಪ್ಪ (29), ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿಯ ಕೃಷ್ಣ ಹುಸೇನ ಮುಳಗುಂದ (20) ಹಾಗೂ ಹುಬ್ಬಳ್ಳಿಯ ತಾರಿಹಾಳ ರಸ್ತೆಯ ಗಣೇಶ್ ಗಂಗಪ್ಪ (22) ಅವರನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ.
ಆರೋಪಿಗಳಿಂದ ರೂ.330 ನಗದು ಹಾಗೂ ಕಳ್ಳತನಕ್ಕೆ ಬಳಸಿದ್ದರೆನ್ನಲಾದ ಸುಮಾರು ರೂ.2 ಲಕ್ಷ ಮೌಲ್ಯದ ಸುಜುಕಿ ಸ್ವಿಫ್ಟ್ ಡಿಜೈರ್ ಕಾರನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿಗಳಾದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿಯ ಗಂಗಪ್ಪ ಯಲ್ಲಪ್ಪ ಕುಂಚಿಕೊರವರ ಹಾಗೂ ಚಿಂಚಲಿಯ ವಡ್ಡರಗಲ್ಲ ನಿವಾಸಿ ಮಂಜು ಖಂಡು ವಡ್ಡರ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಮುಂದುವರಿದ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳು ಗದಗ, ಧಾರವಾಡ, ಉತ್ತರ ಕನ್ನಡ ಹಾಗೂ ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದರೋಡೆ, ಡಕಾಯಿತಿ, ಮನೆ ಕಳ್ಳತನ, ಕುರಿ ಕಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿದ್ದಾಪುರದಲ್ಲಿ ಸರಣಿ ಕಳ್ಳತನ ನಡೆಸುವ ಉದ್ದೇಶದಿಂದ ಬಂದಿದ್ದ ಅಂತರ ಜಿಲ್ಲಾ ಕಳ್ಳರ ಗ್ಯಾಂಗ್‌ನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ತನಿಖಾಧಿಕಾರಿ ಪಿಎಸ್‌ಐ ನಾಗಪ್ಪ ಅವರೊಂದಿಗೆ ರಮೇಶ ಸಿ. ಕೂಡಲ, ಮಂಜಪ್ಪ ಟಿ., ಚೇತನ ಹಲಗೇರಿ, ರಾಜು ಎಂ., ವಿನಾಯಕ ಮಡಿವಾಳ, ನಾಗರಾಜ ತಿಮ್ಮಾಪುರ, ಮಣಿಕಂಠ ಬಿ.ಎನ್., ಅನಿಲ ನಾಯ್ಕ, ಸಂತೋಷ ತಳವಾರ, ರವಿ ಕ್ಯಾಲಕೊಂಡ, ಹೆಚ್‌ಜಿ ತಿಮ್ಮಪ್ಪ ಗೌಡ ಹಾಗೂ ಪ್ರಶಾಂತ ಅವರು ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


