ಕಾರವಾರ: ಸಾರ್ವಜನಿಕ ಗ್ರಂಥಾಲಯ ಇಲಾಖೆ 2023ನೇ ಸಾಲಿನಲ್ಲಿ ಮುದ್ರಣಗೊಂಡ ಪುಸ್ತಕಗಳ ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಆಯ್ಕೆಯಾದ ಹಾಗೂ ಆಯ್ಕೆಯಾಗದ ಪುಸ್ತಕಗಳ ತಾತ್ಕಾಲಿಕ ಪಟ್ಟಿಯನ್ನು ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿದೆ.
ಆಯ್ಕೆಯಾದ ಮತ್ತು ಆಯ್ಕೆಯಾಗದ ಪುಸ್ತಕಗಳ ಪ್ರದರ್ಶನವನ್ನು ಅ.12ರಿಂದ 14ರವರೆಗೆ ಬೆಂಗಳೂರಿನ ವಿಜಯನಗರದಲ್ಲಿರುವ ಡಾ. ವಿಷ್ಣುವರ್ಧನ ಸ್ಮಾರಕ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದ ಗ್ರಂಥಾಲಯ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಏರ್ಪಡಿಸಲಾಗಿದೆ.
ಆಯ್ಕೆಯಾದ ಎಲ್ಲ ಭಾಷೆಗಳ ತಾತ್ಕಾಲಿಕ ಪಟ್ಟಿಯನ್ನು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯಗಳ ಕಚೇರಿಗಳಲ್ಲೂ ಪ್ರದರ್ಶಿಸಲಾಗುತ್ತದೆ. ಇಲಾಖೆಯ ವೆಬ್‌ಸೈಟ್ dpl.karnataka.gov.in ನಲ್ಲಿಯೂ ಸಾರ್ವಜನಿಕರು ಮತ್ತು ಲೇಖಕರು ಪಟ್ಟಿಯನ್ನು ವೀಕ್ಷಿಸಬಹುದಾಗಿದೆ.
ಪುಸ್ತಕ ಆಯ್ಕೆಗೆ ಸಂಬಂಧಿಸಿದಂತೆ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಹಾಗೂ ಪುಸ್ತಕ ಮಾರಾಟಗಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅ.12ರಿಂದ ಅ.22ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5.30ರೊಳಗೆ ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು–560001 ಇಲ್ಲಿಗೆ ಲಿಖಿತ ಮನವಿ ಸಲ್ಲಿಸಬಹುದು.
ನಿಗದಿತ ಅವಧಿಯ ನಂತರ ಸಲ್ಲಿಕೆಯಾಗುವ ಯಾವುದೇ ಮನವಿ ಅಥವಾ ಆಕ್ಷೇಪಣೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತೆ ವಿದ್ಯಾಕುಮಾರಿ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


