ಸಿದ್ದಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸೇವೆಗೆ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಉತ್ತರ ಕನ್ನಡ ವತಿಯಿಂದ ‘ಸೇವಾ ಸಂಕಲ್ಪ’ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ‘ಸೇವಾ ಸೇತು’ ಕಾರ್ಯಕ್ರಮವನ್ನು ಅ.9ರಂದು ಸಿದ್ದಾಪುರ ತಾಲೂಕಿನ ಬಿಳಗಿಯಲ್ಲಿ ಆಯೋಜಿಸಲಾಗಿದೆ.
ಬಿಳಗಿ ಸೇವಾ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಿಎಂ ಕಿಸಾನ್ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಆಯುಷ್ಮಾನ್ ಕಾರ್ಡ್ ಸೇವೆ ಹಾಗೂ ಅಂಚೆ ಕಚೇರಿ ವತಿಯಿಂದ ಆಧಾರ್ ಕಾರ್ಡ್ ತಿದ್ದುಪಡಿ ಸೇವೆಯೂ ಲಭ್ಯವಿರಲಿದೆ.
ಇದರೊಂದಿಗೆ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ಅಸ್ಮಿತೆ ಫೌಂಡೇಷನ್ ಸಹಯೋಗದಲ್ಲಿ ಕ್ಯಾನ್ಸರ್ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಡಾ. ಮಮತಾ ಹೆಗಡೆ, ದಂತ ವೈದ್ಯೆ ಡಾ. ಪೂಜಿತಾ ಹೆಗಡೆ, ಡಾ. ಸೌಭಾಗ್ಯ, ಡಾ. ರಿಯಾಜ್ ಸಾಗರ್, ಡಾ. ವಿರೇಶ ಎಸ್. ಬಾಳೇಹೊಸೂರ್, ಡಾ. ಶ್ರೇಯಸ್ ವೈದ್ಯ, ಡಾ. ಸಾಹುಕಾರ ಬಿ.ಎಂ. ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ರೋಹಿಣಿ ಸೈಲ್ ಅವರು ಶಿಬಿರದಲ್ಲಿ ಲಭ್ಯರಿರಲಿದ್ದಾರೆ.
ಶಿಬಿರದಲ್ಲಿ ನುರಿತ ವೈದ್ಯರಿಂದ ಉಚಿತ ಕಣ್ಣಿನ ತಪಾಸಣೆ, ಕ್ಯಾನ್ಸರ್ ತಪಾಸಣೆ, ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಗುತ್ತದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.


