ಯಲ್ಲಾಪುರ: ನದಿ ಉಳಿವಿನ ಹೋರಾಟವನ್ನು ಇಡೀ ಜಿಲ್ಲೆಯ ಹೋರಾಟವನ್ನಾಗಿ ರೂಪಿಸಬೇಕು. ಜಾತಿ, ಧರ್ಮ ಹಾಗೂ ರಾಜಕೀಯ ಭೇದ ಬದಿಗಿಟ್ಟು ಜಿಲ್ಲೆಯ ಹಿತಕ್ಕಾಗಿ ಎಲ್ಲರೂ ಒಂದಾಗುವ ಅಗತ್ಯವಿದೆ ಎಂದು ರಸ್ತೆ ತಡೆ ಸಂಚಾಲನಾ ಸಮಿತಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ನದಿ ಜೋಡಣೆ ಯೋಜನೆ ವಿರೋಧಿಸಿ ನ.3ರಂದು ಯಲ್ಲಾಪುರ ಪಟ್ಟಣದಲ್ಲಿ ನಡೆಯಲಿರುವ ಬೃಹತ್ ರಸ್ತೆ ತಡೆ ಹೋರಾಟದ ಸಿದ್ಧತೆ ಕುರಿತು ಟಿಎಂಎಸ್ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹೋರಾಟಕ್ಕೆ ಜಿಲ್ಲೆಯ ಜನರ ಹೆಚ್ಚಿನ ಬೆಂಬಲ ಅಗತ್ಯವಿದ್ದು, ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಇದರಲ್ಲಿ ಕೈಜೋಡಿಸಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ಗಮನ ಸೆಳೆಯಬೇಕು ಎಂದು ಕರೆ ನೀಡಿದರು.
ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನದಿ ಜೋಡಣೆ ಯೋಜನೆಯಿಂದ ಜಿಲ್ಲೆಯ ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ನದಿಗಳ ಸಂರಕ್ಷಣೆಯ ವಿಚಾರದಲ್ಲಿ ಜನರು ಸ್ವಯಂಪ್ರೇರಣೆಯಿಂದ ಹೋರಾಟಕ್ಕೆ ಮುಂದಾಗುವಂತೆ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
ಯೋಜನೆ ವಿರೋಧದ ವಿಚಾರದಲ್ಲಿ ಜನಪ್ರತಿನಿಧಿಗಳು ಕೇವಲ ಭರವಸೆ ನೀಡುವುದಕ್ಕಿಂತ ತಮ್ಮ ನಿಲುವನ್ನು ಸ್ಪಷ್ಟವಾಗಿ ತೋರಿಸಬೇಕು ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹೋರಾಟಕ್ಕೆ ಸ್ಪಂದಿಸುವವರೆಗೆ ರಸ್ತೆ ತಡೆ ಮುಂದುವರಿಸುವ ಕುರಿತು ಸಭೆಯಲ್ಲಿ ನಿರ್ಧಾರ ವ್ಯಕ್ತವಾಯಿತು.
ರಸ್ತೆ ತಡೆ ಹೋರಾಟದ ಸಂಘಟನಾ ಕಾರ್ಯಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಸಮಿತಿಗಳನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಹೋರಾಟದ ಖರ್ಚು-ವೆಚ್ಚ ನಿರ್ವಹಣೆಗೆ ಆರ್ಥಿಕ ಸಮಿತಿ ಹಾಗೂ ಪ್ರಚಾರ ಕಾರ್ಯಕ್ಕಾಗಿ ಮಾಧ್ಯಮ ಸಮಿತಿ ಸೇರಿದಂತೆ ಹಲವು ಸಮಿತಿಗಳನ್ನು ರಚಿಸಲು ನಿರ್ಧರಿಸಲಾಯಿತು.
ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ನದಿ ಜೋಡಣೆ ಯೋಜನೆಯ ಕುರಿತು ಹಾಗೂ ಹೋರಾಟದ ಉದ್ದೇಶದ ಬಗ್ಗೆ ಜನರಿಗೆ ಮಾಹಿತಿ ನೀಡಲು ತಾಲೂಕು ಸಂಚಾಲಕರು ಮತ್ತು ಪ್ರಮುಖರಿಗೆ ಜವಾಬ್ದಾರಿ ವಹಿಸಲಾಯಿತು. ಯಲ್ಲಾಪುರ ಪಟ್ಟಣದಲ್ಲಿಯೂ ಜನ ಸಂಪರ್ಕ ನಡೆಸಲು ಪ್ರತ್ಯೇಕ ತಂಡ ರಚಿಸುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ರಾಘವೇಂದ್ರ ಭಟ್ಟ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಎಂ.ಆರ್. ಹೆಗಡೆ ತಾರೆಹಳ್ಳಿ, ರವಿ ಹೆಗಡೆ, ಶ್ರೀರಾಮ ಲಾಲಗುಳಿ, ಸುಬ್ಬಣ್ಣ ಬೋಳ್ಮನೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ನಾರಾಯಣ ಸುರ್ಗಿಮನೆ, ವಿ.ಟಿ. ಹೆಗಡೆ, ಕೆ.ಟಿ. ಹೆಗಡೆ, ದತ್ತಾತ್ರಯ ಹೆಗಡೆ ಕಣ್ಣಿಪಾಲ್, ಭಾಸ್ಕರ ಸಿದ್ದಿ, ಮಹೇಶ ಕುಣಬಿ, ಸಂತೋಷ ಭಟ್ಟ ಹಳವಳ್ಳಿ, ವಿನೋದ ಭಟ್ಟ, ಎಂ.ಕೆ. ಭಟ್ಟ ಯಡಳ್ಳಿ, ರಘುಪತಿ ಹೆಗಡೆ, ಎನ್.ಜಿ. ಹೆಗಡೆ ಭಟ್ರಕೇರಿ, ಸುಬ್ಬಣ್ಣ ಉದ್ದಾಬೈಲ, ನಾರಾಯಣ ಭಟ್ಟ ಶಿರವಳ್ಳಿ, ನಾರಾಯಣ ಹೆಗಡೆ ಕಲ್ಲೇಶ್ವರ, ಪುರಂದರ ನಾಯ್ಕ, ರಘುಪತಿ ಕಂಪ್ಲಿ, ರಾಘು ಭಟ್ಟ ಸುಂಕಸಾಳ ಮುಂತಾದವರು ಸಲಹೆ-ಸೂಚನೆ ನೀಡಿದರು.
ಕೊಳ್ಳ ಸಂರಕ್ಷಣಾ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಸಭೆ ನಿರ್ವಹಿಸಿ ವಂದಿಸಿದರು.


