Friday, October 23, 2026
HomeLocal Newsಮೀಸಲಾತಿ ಪ್ರಕಟ; ಜಿ.ಪಂ–ತಾ.ಪಂ ಅಖಾಡದಲ್ಲಿ ಹೊಸ ಲೆಕ್ಕಾಚಾರ!

ಮೀಸಲಾತಿ ಪ್ರಕಟ; ಜಿ.ಪಂ–ತಾ.ಪಂ ಅಖಾಡದಲ್ಲಿ ಹೊಸ ಲೆಕ್ಕಾಚಾರ!

ಕಾರವಾರ: ಬಹುದಿನಗಳಿಂದ ಕುತೂಹಲ ಮೂಡಿಸಿದ್ದ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಮೀಸಲಾತಿ ಕೊನೆಗೂ ಹೊರಬಿದ್ದಿದೆ.

ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಜಿಲ್ಲೆಯ ರಾಜಕೀಯ ಅಖಾಡದಲ್ಲಿ ಚಟುವಟಿಕೆಗಳು ಗರಿಗೆದರಲಿದ್ದು, ಅದರಲ್ಲೂ ಮಹಿಳಾ ಆಕಾಂಕ್ಷಿಗಳಿಗೆ ಈ ಬಾರಿ ದೊಡ್ಡ ಅವಕಾಶದ ಬಾಗಿಲು ತೆರೆದಿದೆ.

ಒಟ್ಟು 53 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ 27 ಹಾಗೂ 118 ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ 65 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುವುದು ಚುನಾವಣಾ ಲೆಕ್ಕಾಚಾರವನ್ನೇ ಬದಲಿಸುವ ಸಾಧ್ಯತೆ ಇದೆ.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಅನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವರ್ಗವಾರು ಮೀಸಲಾತಿಯನ್ನು ನಿಗದಿಪಡಿಸಿದೆ. ಇದರೊಂದಿಗೆ ಈ ಹಿಂದೆ ಪ್ರಕಟಿಸಲಾಗಿದ್ದ ಮೀಸಲಾತಿ ಅಧಿಸೂಚನೆಗಳನ್ನು ರದ್ದುಗೊಳಿಸಿ ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ.

ಜಿಲ್ಲಾ ಪಂಚಾಯತ್‌ನ 53 ಸ್ಥಾನಗಳ ಪೈಕಿ ಸಾಮಾನ್ಯ ವರ್ಗಕ್ಕೆ 30, ಹಿಂದುಳಿದ ವರ್ಗ ‘ಅ’ಕ್ಕೆ 14, ಹಿಂದುಳಿದ ವರ್ಗ ‘ಬ’ಕ್ಕೆ 4, ಪರಿಶಿಷ್ಟ ಜಾತಿಗೆ 4 ಹಾಗೂ ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನ ನಿಗದಿಯಾಗಿದೆ. ಈ ಒಟ್ಟು ಸ್ಥಾನಗಳಲ್ಲಿ 27 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿವೆ.

ಸಾಮಾನ್ಯ ವರ್ಗದ 15, ಹಿಂದುಳಿದ ವರ್ಗ ‘ಅ’ದ 7, ಹಿಂದುಳಿದ ವರ್ಗ ‘ಬ’ದ 2, ಪರಿಶಿಷ್ಟ ಜಾತಿಯ 2 ಹಾಗೂ ಪರಿಶಿಷ್ಟ ಪಂಗಡದ ಒಂದು ಸ್ಥಾನ ಮಹಿಳೆಯರ ಪಾಲಾಗಿದೆ.

ತಾಲೂಕು ಪಂಚಾಯತ್ ಮಟ್ಟದಲ್ಲಿ ಮಹಿಳೆಯರ ಪ್ರಾತಿನಿಧ್ಯ ಇನ್ನಷ್ಟು ಗಮನ ಸೆಳೆಯುವಂತಿದೆ. ಜಿಲ್ಲೆಯ 118 ತಾಲೂಕು ಪಂಚಾಯತ್ ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ 13, ಪರಿಶಿಷ್ಟ ಪಂಗಡಕ್ಕೆ 12, ಹಿಂದುಳಿದ ವರ್ಗ ‘ಅ’ಕ್ಕೆ 25, ಹಿಂದುಳಿದ ವರ್ಗ ‘ಬ’ಕ್ಕೆ 3 ಹಾಗೂ ಸಾಮಾನ್ಯ ವರ್ಗಕ್ಕೆ 65 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.

ಇದರಲ್ಲಿ ಪರಿಶಿಷ್ಟ ಜಾತಿಯ 12, ಪರಿಶಿಷ್ಟ ಪಂಗಡದ 12, ಹಿಂದುಳಿದ ವರ್ಗ ‘ಅ’ದ 15 ಹಾಗೂ ಸಾಮಾನ್ಯ ವರ್ಗದ 26 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು, ಒಟ್ಟಾರೆ 65 ಸ್ಥಾನಗಳು ಮಹಿಳೆಯರ ಪಾಲಾಗಿವೆ.

ವಿಶೇಷವೆಂದರೆ, ತಾಲೂಕು ಪಂಚಾಯತ್‌ನ ಪರಿಶಿಷ್ಟ ಪಂಗಡದ 12 ಸ್ಥಾನಗಳೂ ಮಹಿಳೆಯರಿಗೆ ಮೀಸಲಾಗಿವೆ. ಪರಿಶಿಷ್ಟ ಜಾತಿಯ 13 ಸ್ಥಾನಗಳ ಪೈಕಿ 12 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು, ಈ ಮೀಸಲಾತಿ ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ರಾಜಕೀಯ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಸಾಮಾನ್ಯ ವರ್ಗದಲ್ಲಿಯೂ 26 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುವುದರಿಂದ ವಿವಿಧ ಪಕ್ಷಗಳಲ್ಲಿ ಮಹಿಳಾ ಅಭ್ಯರ್ಥಿಗಳ ಹುಡುಕಾಟಕ್ಕೆ ಹೊಸ ವೇಗ ಬರಲಿದೆ.

ಮೀಸಲಾತಿ ಪ್ರಕಟವಾಗುವುದಕ್ಕೂ ಮುನ್ನವೇ ಹಲವು ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಇದೀಗ ಮೀಸಲಾತಿ ಸ್ಪಷ್ಟವಾಗಿರುವುದರಿಂದ ಆ ಚರ್ಚೆ ಮತ್ತಷ್ಟು ಗಂಭೀರ ಸ್ವರೂಪ ಪಡೆಯಲಿದೆ. ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿರುವವರು ಹಾಗೂ ಸ್ಥಳೀಯವಾಗಿ ಗುರುತಿಸಿಕೊಂಡಿರುವ ಮಹಿಳೆಯರತ್ತ ಪಕ್ಷಗಳ ಗಮನ ಹರಿಯುವ ಸಾಧ್ಯತೆ ಇದೆ.

ಈ ಮೀಸಲಾತಿ ಕೇವಲ ಅಭ್ಯರ್ಥಿಗಳ ಆಯ್ಕೆಯ ಮೇಲಷ್ಟೇ ಅಲ್ಲದೆ, ಸ್ಥಳೀಯ ರಾಜಕೀಯ ಸಮೀಕರಣ, ಪಕ್ಷಗಳ ಸಂಘಟನೆ ಹಾಗೂ ಮುಂದಿನ ದಿನಗಳ ನಾಯಕತ್ವದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ವಿವಿಧ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿರುವ ಆಕಾಂಕ್ಷಿಗಳು ತಮ್ಮ ಕ್ಷೇತ್ರದ ಮೀಸಲಾತಿ ಪರಿಶೀಲಿಸಿ ಮುಂದಿನ ತಂತ್ರ ರೂಪಿಸುವ ಅನಿವಾರ್ಯತೆ ಎದುರಾಗಿದೆ.

ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಜಿಲ್ಲೆಯ ರಾಜಕೀಯ ವಲಯದಲ್ಲಿ ಒಂದೇ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಯಾವ ಕ್ಷೇತ್ರದಿಂದ ಯಾರು ಕಣಕ್ಕಿಳಿಯುತ್ತಾರೆ? ಅದರಲ್ಲೂ ಮಹಿಳೆಯರಿಗೆ ಮೀಸಲಾದ 27 ಜಿಲ್ಲಾ ಪಂಚಾಯತ್ ಹಾಗೂ 65 ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಯಾವ ಪಕ್ಷ ಯಾವ ಮುಖಕ್ಕೆ ಮಣೆ ಹಾಕಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಹೀಗಾಗಿ ಮೀಸಲಾತಿ ಅಧಿಸೂಚನೆ ಹೊರಬಿದ್ದಿರುವುದು ಚುನಾವಣಾ ಪ್ರಕ್ರಿಯೆಯ ಮತ್ತೊಂದು ಹಂತ ಆರಂಭವಾದಂತಾಗಿದೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ, ಪಕ್ಷಗಳ ತಂತ್ರ ಹಾಗೂ ಸ್ಥಳೀಯ ರಾಜಕೀಯದ ಬಿಸಿ ಇನ್ನಷ್ಟು ಏರುವ ನಿರೀಕ್ಷೆಯಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share