ಶಿರಸಿ: ಸ್ಕೂಟಿ ಸ್ಕಿಡ್ ಆಗಿ ಬಿದ್ದು ತಲೆಗೆ ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸವಾರನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಮೂಲಕ ಶಿರಸಿಯ 112 ERSS ಪೊಲೀಸ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದಿದ್ದಾರೆ.
ಅ.9ರ ರಾತ್ರಿ ಸುಮಾರು 1 ಗಂಟೆಗೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಚ್ಬಿ ಕಾಲೋನಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದ ಸಮೀಪ ಅಪಘಾತ ಸಂಭವಿಸಿತ್ತು. ಸ್ಕೂಟಿ (KA-31-EF-0031) ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ದರ್ಶನ್ ಮಂಜುನಾಥ ನಾಯ್ಕ ಅವರ ತಲೆಗೆ ಗಾಯವಾಗಿರುವ ಬಗ್ಗೆ 112 ERSS ರೂಟ್ ನಂ. 14ರ ವಾಹನಕ್ಕೆ ತುರ್ತು ಕರೆ ಬಂದಿತ್ತು.
ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಪರಿಶೀಲಿಸಿದಾಗ, ದರ್ಶನ್ ಅವರ ತಲೆಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗುತ್ತಿದ್ದು, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ತಡಮಾಡದೆ ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಶಿರಸಿಯ ಪಿಜಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲು ನೆರವಾದರು.
ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದ 112 ERSS ರೂಟ್ ನಂ. 14ರ ಪೊಲೀಸ್ ಸಿಬ್ಬಂದಿ ಸಿಪಿಐ-659 ಪ್ರಕಾಶ್ ಬೋವಿವಡ್ಡರ್ ಹಾಗೂ ವಾಹನ ಚಾಲಕ ಎ.ಎಚ್.ಸಿ. ಮುಕ್ತಿಯಾರ್ ಮಂಡಕ್ಕಿ ಅವರ ಕರ್ತವ್ಯ ನಿರ್ವಹಣೆಗೆ ಹಿರಿಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


