Friday, October 23, 2026
HomeLocal Newsನದಿ ತಿರುವು ಯೋಜನೆ ವಿರುದ್ಧ ಹೋರಾಟ; ಗ್ರಾಮ ಮಟ್ಟದಲ್ಲಿ ಸಿದ್ಧತೆ

ನದಿ ತಿರುವು ಯೋಜನೆ ವಿರುದ್ಧ ಹೋರಾಟ; ಗ್ರಾಮ ಮಟ್ಟದಲ್ಲಿ ಸಿದ್ಧತೆ

ಯಲ್ಲಾಪುರ: ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನ. 3ರಂದು ಯಲ್ಲಾಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ತಡೆಗೆ ಜನಬೆಂಬಲ ಕ್ರೋಡೀಕರಿಸುವ ಕಾರ್ಯಕ್ಕೆ ಹೋರಾಟ ಸಮಿತಿಗಳು ವೇಗ ನೀಡಿವೆ. ಈ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ಸಂಪರ್ಕ ಸಭೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಯಲ್ಲಾಪುರ ರಸ್ತೆ ತಡೆ ಸಂಚಾಲನಾ ಸಮಿತಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ನದಿ ತಿರುವು ಯೋಜನೆ ಸ್ಥಗಿತಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ಯಶಸ್ವಿಯಾಗಬೇಕು ಎಂದರು.

ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಯೋಜನೆಯಿಂದ ಪರಿಸರ ಹಾಗೂ ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯ. ಹೀಗಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರನ್ನು ಸಂಪರ್ಕಿಸಿ, ಹೆದ್ದಾರಿ ತಡೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗುತ್ತಿದೆ ಎಂದರು.

ಗ್ರಾಮಗಳಲ್ಲಿ ಸಂಪರ್ಕ ಸಭೆಗಳ ವೇಳಾಪಟ್ಟಿ

ಅಕ್ಟೋಬರ್ 14ರಂದು ಮಧ್ಯಾಹ್ನ 3ಕ್ಕೆ ಮಲವಳ್ಳಿಯ ರಾಮಲಿಂಗೇಶ್ವರ ದೇವಸ್ಥಾನ, ಸಂಜೆ 5ಕ್ಕೆ ವಜ್ರಳ್ಳಿ ಸೊಸೈಟಿ ಸಭಾಭವನ ಹಾಗೂ 6.30ಕ್ಕೆ ಚಿನ್ನಾಪುರದ ಚಿನ್ನೇಶ್ವರ ದೇವಸ್ಥಾನದಲ್ಲಿ ಸಭೆಗಳು ನಡೆಯಲಿವೆ.

ಅಕ್ಟೋಬರ್ 15ರಂದು ಮಧ್ಯಾಹ್ನ 3ಕ್ಕೆ ದೇಹಳ್ಳಿ ಸೊಸೈಟಿ ಸಭಾಭವನ, 4.30ಕ್ಕೆ ಆನಗೋಡ ಸೊಸೈಟಿ ಸಭಾಭವನ, ಸಂಜೆ 6.30ಕ್ಕೆ ಕಣ್ಣಿಗೇರಿ ಸೊಸೈಟಿ ಸಭಾಭವನ ಹಾಗೂ ರಾತ್ರಿ 8ಕ್ಕೆ ನಂದೊಳ್ಳಿಯ ಸಾರ್ವಜನಿಕ ಗಜಾನನೋತ್ಸವ ಕಟ್ಟಡದಲ್ಲಿ ಸಭೆ ಆಯೋಜಿಸಲಾಗಿದೆ.

ಅಕ್ಟೋಬರ್ 16ರಂದು ಮಧ್ಯಾಹ್ನ 3ಕ್ಕೆ ಕುಂದರಗಿ ಸೊಸೈಟಿ, 4.30ಕ್ಕೆ ಉಮ್ಮಚಗಿ ಸೊಸೈಟಿ, ಸಂಜೆ 6ಕ್ಕೆ ಹಿತ್ಲಳ್ಳಿ ಸೊಸೈಟಿ ಹಾಗೂ 7.30ಕ್ಕೆ ಹಾಸಣಗಿ ಸೊಸೈಟಿ ಸಭಾಭವನದಲ್ಲಿ ಸಂಪರ್ಕ ಸಭೆಗಳು ನಡೆಯಲಿವೆ.

ಅಕ್ಟೋಬರ್ 18ರಂದು ಮಧ್ಯಾಹ್ನ 3ಕ್ಕೆ ಕಿರವತ್ತಿ, ಸಂಜೆ 5ಕ್ಕೆ ಹುಣಶೆಟ್ಟಿಕೊಪ್ಪ ಹಾಗೂ ಸಂಜೆ 7ಕ್ಕೆ ಉಪಳೇಶ್ವರದಲ್ಲಿ ಸಭೆ ನಡೆಯಲಿದೆ. ಅಕ್ಟೋಬರ್ 21ರಂದು ಮಧ್ಯಾಹ್ನ 3.30ಕ್ಕೆ ಮುಂಡಗೋಡ ತಾಲೂಕಿನ ಬೆಡಸಗಾಂವ ಹಾಗೂ ಸಂಜೆ 5ಕ್ಕೆ ಪಾಳಾದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ.

ಅಕ್ಟೋಬರ್ 22ರಂದು ಸಂಜೆ 5ಕ್ಕೆ ಯಲ್ಲಾಪುರದ ಎಲ್.ಎಸ್.ಎಂ.ಪಿ. ಸೊಸೈಟಿ ಸಭಾಭವನದಲ್ಲಿ ಪಟ್ಟಣ ವ್ಯಾಪ್ತಿಯ ಸಭೆ ನಡೆಯಲಿದೆ. ಅಕ್ಟೋಬರ್ 23ರಂದು ಮಧ್ಯಾಹ್ನ 3.30ಕ್ಕೆ ಹಳಿಯಾಳ ತಾಲೂಕಿನ ಭಾಗವತಿ, ಡೌಗಿನಾಲಾ ಹಾಗೂ ಸಾಂಬ್ರಾಣಿ ಭಾಗಗಳಲ್ಲಿ ಸಂಪರ್ಕ ಸಭೆಗಳನ್ನು ನಡೆಸಲು ಯೋಜಿಸಲಾಗಿದೆ.

ಎಲ್ಲ ಗ್ರಾಮಗಳ ಜನರನ್ನು ತಲುಪಿ, ನದಿ ತಿರುವು ಯೋಜನೆಗಳ ಕುರಿತ ವಿರೋಧವನ್ನು ಸರ್ಕಾರದ ಗಮನಕ್ಕೆ ತರಲು ಹೆಚ್ಚಿನ ಜನರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಹರಿಪ್ರಕಾಶ ಕೋಣೆಮನೆ ಮನವಿ ಮಾಡಿದರು.

ಸಭೆಯಲ್ಲಿ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ ನರಸಿಂಹ ಸಾತೊಡ್ಡಿ, ರಸ್ತೆ ತಡೆ ಸಮಿತಿಯ ಸಂಚಾಲಕರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ವಿ.ಟಿ. ಹೆಗಡೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ರವಿ ಭಟ್ಟ ಬಿಡಾರ, ರಾಘವೇಂದ್ರ ಭಟ್ಟ, ರಘುಪತಿ ಹೆಗಡೆ, ನಾಗರಾಜ ಕವಡಿಕೇರಿ, ಕೆ.ಟಿ. ಹೆಗಡೆ, ಶ್ರೀರಾಮ ಲಾಲಗುಳಿ, ಶ್ರೀಧರ ಅಣಲಗಾರ, ಭಾಸ್ಕರ ಸಿದ್ದಿ, ಗೋಪಾಲಕೃಷ್ಣ ಗಾಂವ್ಕರ ಮುಂತಾದವರು ಪಾಲ್ಗೊಂಡಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share