ಕಾರವಾರ: ದೂರವಾಣಿ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಅಂಕೋಲಾ-ಹಾರವಾಡದ ದೀಪಕ ತಾಂಡೇಲ ಎಂಬುವವರ ವಿರುದ್ಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಣಗಾ-ಮುಡ್ಲಮಕ್ಕಿಯ ಸುಬ್ರಹ್ಮಣ್ಯ ಸೋಮಾ ಹರಿಕಂತ್ರ (49) ನೇವಲ್ ಬೇಸ್‌ನಲ್ಲಿ ಡಿಫೆನ್ಸ್ ಸಿವಿಲಿಯನ್ ಆಗಿ ತಾಂತ್ರಿಕ ಕೆಲಸ ನಿರ್ವಹಿಸುತ್ತಿದ್ದು, ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಅ. 3ರಂದು ರಾತ್ರಿ 8.45ರ ಸುಮಾರಿಗೆ ಸೀಬರ್ಡ್ ಕಾಲೋನಿಯ ದೀಪಕ ತಾಂಡೇಲ ಕರೆ ಮಾಡಿ, ಹೊರರಾಜ್ಯದಿಂದ ಕೆಲಸಗಾರರನ್ನು ಕರೆತಂದಿರುವ ವಿಚಾರವಾಗಿ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ದೂರವಾಣಿ ಸಂಭಾಷಣೆಯನ್ನು ದೂರುದಾರ ಸುಬ್ರಹ್ಮಣ್ಯ ಹರಿಕಂತ್ರ ಅವರ ಸ್ನೇಹಿತ ಸುಬ್ರಹ್ಮಣ್ಯ ಭಟ್ ಅವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಈ ಹಿಂದೆ ಎನ್‌ಸಿ ದಾಖಲಿಸಲಾಗಿತ್ತು. ಬಳಿಕ ಅ. 12ರಂದು ನ್ಯಾಯಾಲಯದಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ಪಡೆದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದಂತೆ ಕಾರವಾರ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


