Thursday, October 22, 2026
HomeLocal Newsಸಮಯಕ್ಕೆ ಸಿಗದ ಆಂಬುಲೆನ್ಸ್‌; ಗಾಯಾಳುವಿಗೆ ರಸ್ತೆಯಲ್ಲೇ ಚಿಕಿತ್ಸೆ!

ಸಮಯಕ್ಕೆ ಸಿಗದ ಆಂಬುಲೆನ್ಸ್‌; ಗಾಯಾಳುವಿಗೆ ರಸ್ತೆಯಲ್ಲೇ ಚಿಕಿತ್ಸೆ!

ಯಲ್ಲಾಪುರ: ಬೈಕ್ ಸ್ಕಿಡ್ ಆಗಿ ರಸ್ತೆಯ ಪಕ್ಕದಲ್ಲಿ ಬಿದ್ದು ಒದ್ದಾಡುತ್ತಿದ್ದ ಕಲಘಟಗಿ ಮೂಲದ ಮಾರುತಿ ಎಂಬುವವರಿಗೆ ಸಕಾಲದಲ್ಲಿ ಆಂಬುಲೆನ್ಸ್ ಸಿಗದೆ ತೊಂದರೆಯಾದ ಘಟನೆ ಮಂಚಿಕೇರಿಯ ತೂಕದಬೈಲ್ ಬಳಿ ನಡೆದಿದೆ.

ಈ ವೇಳೆ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಶಿರಸಿಯ ಮಹಾಲಕ್ಷ್ಮಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ದಿನೇಶ್ ಹೆಗಡೆ ಅವರು ಕಾರು ನಿಲ್ಲಿಸಿ, ಗಾಯಾಳುವಿಗೆ ರಸ್ತೆಯಲ್ಲೇ ಸಲೈನ್ ಹಾಕಿ, ಇಂಜೆಕ್ಷನ್ ನೀಡಿ ಚಿಕಿತ್ಸೆ ಒದಗಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ಮಾರುತಿ ಅವರನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಚಾಲಕರು ಲಭ್ಯವಿಲ್ಲ ಎಂಬ ಉತ್ತರ ಬಂದಿದೆ. ಬಳಿಕ ಮಂಚಿಕೇರಿ ಆಸ್ಪತ್ರೆಯ ಆಂಬುಲೆನ್ಸ್‌ಗೆ ಕರೆ ಮಾಡಿದಾಗ, ಅದು ಸರ್ವಿಸ್‌ಗಾಗಿ ತೆರಳಿದೆ ಎಂಬ ಮಾಹಿತಿ ದೊರೆತಿದೆ. ಹೀಗಾಗಿ ಗಾಯಾಳುವಿಗೆ ತಕ್ಷಣ ಆಂಬುಲೆನ್ಸ್ ವ್ಯವಸ್ಥೆ ಸಿಗದಂತಾಗಿದೆ.

ಈ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಡಾ. ದಿನೇಶ್ ಹೆಗಡೆ ಅವರು ಗಾಯಾಳುವಿನ ಸ್ಥಿತಿಯನ್ನು ಗಮನಿಸಿ, ತಮ್ಮ ಕಾರನ್ನು ನಿಲ್ಲಿಸಿ ನೆರವಿಗೆ ಧಾವಿಸಿದ್ದಾರೆ. ರಸ್ತೆಯಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ನಂತರ ಯಲ್ಲಾಪುರ ತಾಲೂಕು ಆಸ್ಪತ್ರೆಯಿಂದ ಬಂದ ಆಂಬುಲೆನ್ಸ್‌ನಲ್ಲಿ ಮಾರುತಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸ್ಥಳೀಯ ಮಾಹಿತಿಯ ಪ್ರಕಾರ, 108 ಆಂಬುಲೆನ್ಸ್ ಸೇವೆಯಲ್ಲಿ ಎರಡು ಪಾಳಿಗಳಿಗೆ ಮಾತ್ರ ಚಾಲಕರಿದ್ದು, ಮಧ್ಯಾಹ್ನದ ಮೂರನೇ ಪಾಳಿಯಲ್ಲಿ ಚಾಲಕರಿಲ್ಲದ ಪರಿಸ್ಥಿತಿ ಇದೆ ಎನ್ನಲಾಗಿದೆ. ಈ ಕಾರಣದಿಂದ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ ದೊರೆಯಲು ತೊಂದರೆಯಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.

ಅಪಘಾತ ಅಥವಾ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಪ್ರತಿ ಸೆಕೆಂಡ್‌ ಸಮಯ ಕೂಡ ಮಹತ್ವದ್ದಾಗಿರುವಾಗ, ಚಾಲಕರಿಲ್ಲ ಎಂಬ ಕಾರಣಕ್ಕೆ ಸೇವೆ ಸಿಗದಿರುವುದು ಗಂಭೀರ ವಿಚಾರವಾಗಿದೆ.

ಸಂಬಂಧಪಟ್ಟ 108 ಸೇವಾ ಸಂಸ್ಥೆಯವರು ಈ ಸಮಸ್ಯೆಯನ್ನು ಪರಿಶೀಲಿಸಿ, ಎಲ್ಲ ಪಾಳಿಗಳಿಗೂ ಅಗತ್ಯ ಸಂಖ್ಯೆಯ ಚಾಲಕರನ್ನು ನೇಮಿಸಬೇಕು. ಆಂಬುಲೆನ್ಸ್ ಸರ್ವಿಸ್‌ಗೆ ತೆರಳಿದಾಗ ಪರ್ಯಾಯ ವಾಹನದ ವ್ಯವಸ್ಥೆಯನ್ನೂ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಆಂಬುಲೆನ್ಸ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

ಡಾ. ದಿನೇಶ್ ಹೆಗಡೆ ಅವರ ಸಮಯೋಚಿತ ನೆರವು ಮಾನವೀಯತೆಯ ಮಾದರಿಯಾಗಿದೆ. ಆದರೆ, ತುರ್ತು ಸಂದರ್ಭದಲ್ಲಿ ಗಾಯಾಳುಗಳ ಜೀವ ಉಳಿಸುವ ವ್ಯವಸ್ಥೆ ಇಂತಹ ಆಕಸ್ಮಿಕ ನೆರವಿನ ಮೇಲೆ ಅವಲಂಬಿತವಾಗಬಾರದು. ಆಂಬುಲೆನ್ಸ್ ಸೇವೆ ದಿನದ ಎಲ್ಲ ಪಾಳಿಗಳಲ್ಲೂ ಸಮರ್ಪಕವಾಗಿ ಲಭ್ಯವಾಗುವಂತೆ ಮಾಡುವುದು ಸಂಬಂಧಪಟ್ಟವರ ಸಂಬಂಧಿಸಿದ ಅಧಿಕಾರಿಗಳ ಜವಾಬ್ದಾರಿಯಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share