ಕಾರವಾರ: ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ನಿರ್ಮಿತ ಬಹುಉದ್ದೇಶದ ನೌಕೆ ಐಎನ್‌ಎಸ್ ಸಮರ್ಥಕ್, ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಹೆಚ್ಚಿನ ಬಲ ನೀಡಿದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ಶುಕ್ರವಾರ ಕಾರವಾರದ ಕದಂಬ ನೌಕಾನೆಲೆಯಲ್ಲಿ ಐಎನ್‌ಎಸ್ ಸಮರ್ಥಕ್ ನೌಕೆಯನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆ ಹಾಗೂ ಅತ್ಯಾಧುನಿಕ ಸ್ವದೇಶಿ ನೌಕಾ ಸಾಮರ್ಥ್ಯಗಳ ಅಭಿವೃದ್ಧಿಯ ಪಯಣದಲ್ಲಿ ಐಎನ್‌ಎಸ್ ಸಮರ್ಥಕ್ ಸೇರ್ಪಡೆ ಮಹತ್ವದ ಮೈಲಿಗಲ್ಲಾಗಿದೆ. ಶೇ.75ಕ್ಕೂ ಅಧಿಕ ಸ್ವದೇಶಿ ಘಟಕಗಳನ್ನು ಹೊಂದಿರುವ ಈ ನೌಕೆಯು ಭಾರತದ ಕೈಗಾರಿಕಾ, ತಾಂತ್ರಿಕ ಮತ್ತು ಹಡಗು ನಿರ್ಮಾಣ ಸಾಮರ್ಥ್ಯದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ರಕ್ಷಣಾ ಕ್ಷೇತ್ರದ ಸ್ವಾವಲಂಬನೆ ಕೇವಲ ಆಶಯವಾಗಿ ಉಳಿಯದೆ ವಾಸ್ತವ ರೂಪ ಪಡೆಯುತ್ತಿದೆ ಎಂದು ಅವರು ತಿಳಿಸಿದರು.
ಭಾರತದ ಶ್ರೀಮಂತ ಸಮುದ್ರ ಪರಂಪರೆಯನ್ನು ಸ್ಮರಿಸಿದ ಉಪರಾಷ್ಟ್ರಪತಿ, ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಚೋಳರ ನೌಕಾ ಪರಂಪರೆಯು ಹಿಂದೂ ಮಹಾಸಾಗರ ಹಾಗೂ ಆಗ್ನೇಯ ಏಷ್ಯಾದಲ್ಲಿ ಭಾರತದ ಸಮುದ್ರ ಪ್ರಭಾವ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದರು.
ದೇಶದ ಸಾರ್ವಭೌಮತ್ವ ಮತ್ತು ಸಮುದ್ರ ಹಿತಾಸಕ್ತಿಗಳ ರಕ್ಷಣೆಯಲ್ಲಿ ಭಾರತೀಯ ನೌಕಾಪಡೆಯ ಸೇವೆಯನ್ನು ಶ್ಲಾಘಿಸಿದ ಅವರು, ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ, ಭಾರತೀಯ ನಾಗರಿಕರ ಸ್ಥಳಾಂತರ, ಮಾನವೀಯ ನೆರವು ಹಾಗೂ ವಿಪತ್ತು ಪರಿಹಾರ ಕಾರ್ಯಗಳಲ್ಲಿ ನೌಕಾಪಡೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಐಎನ್‌ಎಸ್ ಸಮರ್ಥಕ್ ಮುಂದಿನ ಪೀಳಿಗೆಯ ಶಸ್ತ್ರಾಸ್ತ್ರಗಳು, ಸಂವೇದಕಗಳು ಮತ್ತು ಹೊಸ ತಂತ್ರಜ್ಞಾನಗಳ ಪರೀಕ್ಷೆ ಹಾಗೂ ಮೌಲ್ಯಮಾಪನಕ್ಕೆ ಬಹುಮುಖ ವೇದಿಕೆಯಾಗಲಿದೆ. ಸಮುದ್ರ ಕಣ್ಗಾವಲು, ವಿಚಕ್ಷಣ, ಗಸ್ತು, ಮಾನವರಹಿತ ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ವಿಪತ್ತು ಪರಿಹಾರ ಕಾರ್ಯಗಳಿಗೂ ಈ ನೌಕೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಕಾರವಾರದ ಆಳವಾದ ನೈಸರ್ಗಿಕ ಬಂದರು ಮತ್ತು ಅರಬ್ಬಿ ಸಮುದ್ರಕ್ಕೆ ಇರುವ ಸಮೀಪತೆಯಿಂದಾಗಿ ಭಾರತದ ಸಮುದ್ರ ಭದ್ರತೆಯಲ್ಲಿ ಈ ಪ್ರದೇಶಕ್ಕೆ ವಿಶೇಷ ಮಹತ್ವವಿದೆ. ಪ್ರಾಜೆಕ್ಟ್ ಸೀಬರ್ಡ್ ಅಡಿಯಲ್ಲಿ ಆಧುನಿಕ ನೌಕಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನೆಲೆಗೊಳಿಸಲು ಸಾಧ್ಯವಾಗಲಿದೆ ಎಂದು ಉಪರಾಷ್ಟ್ರಪತಿ ತಿಳಿಸಿದರು.
ನೌಕೆಯ ನಿರ್ಮಾಣಕ್ಕೆ ಕೊಡುಗೆ ನೀಡಿದ ಎಲ್ ಆ್ಯಂಡ್ ಟಿ ಸಂಸ್ಥೆ ಹಾಗೂ ಎಂಜಿನಿಯರ್‌ಗಳು, ತಂತ್ರಜ್ಞರು ಮತ್ತು ಇತರ ಸಿಬ್ಬಂದಿಯ ಕಾರ್ಯವನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ಪಶ್ಚಿಮ ನೌಕಾ ಕಮಾಂಡ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್, ಕಂಟ್ರೋಲರ್ ಆಫ್ ವಾರ್ಷಿಪ್ ಪ್ರೊಡಕ್ಷನ್ ಅಂಡ್ ಅಕ್ವಿಸಿಷನ್ ವೈಸ್ ಅಡ್ಮಿರಲ್ ಸಂಜಯ್ ಸಾಧು, ಕರ್ನಾಟಕದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್, ಎಲ್ ಆ್ಯಂಡ್ ಟಿ ಹಡಗು ನಿರ್ಮಾಣ ವಿಭಾಗದ ಮುಖ್ಯಸ್ಥ ನಿವೃತ್ತ ರಿಯರ್ ಅಡ್ಮಿರಲ್ ಜಿ.ಕೆ. ಹರೀಶ್, ಐಎನ್‌ಎಸ್ ಸಮರ್ಥಕ್‌ನ ಕಮಾಂಡಿಂಗ್ ಆಫೀಸರ್ ಕಮಾಂಡರ್ ಸುಶೀಲ್ ಕುಮಾರ್ ಸಿಂಗ್ ಸೇರಿದಂತೆ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


