ಕಾರವಾರ: ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಸಮೀಕ್ಷೆ ವೇಳೆ ಮನೆಗಳಿಗೆ ಬೀಗ ಹಾಕಿರುವುದು (Door Lock) ಅಥವಾ ಮನೆ ಖಾಲಿ ಇರುವುದಾಗಿ (Vacant) ದಾಖಲಾಗಿರುವ ಗ್ರಾಹಕರು 10 ದಿನಗಳೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಹೆಸ್ಕಾಂ ಸೂಚಿಸಿದೆ.
ಜುಲೈ 1ರಿಂದ ಹೆಸ್ಕಾಂ ಸಿಬ್ಬಂದಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಸಮೀಕ್ಷೆ ನಡೆಸುತ್ತಿದ್ದಾರೆ. ಈ ವೇಳೆ Door Lock ಹಾಗೂ Vacant ಎಂದು ದಾಖಲಾಗಿರುವ ಸ್ಥಾವರಗಳ ಗ್ರಾಹಕರ ಮೊಬೈಲ್‌ಗೆ ಈ ಕುರಿತು ಸಂದೇಶ ಕಳುಹಿಸಲಾಗಿದೆ. ಅಂತಹ ಗ್ರಾಹಕರು ಅಗತ್ಯ ದಾಖಲೆಗಳೊಂದಿಗೆ ಹೊನ್ನಾವರ, ಕುಮಟಾ ಅಥವಾ ಭಟ್ಕಳದ ಹೆಸ್ಕಾಂ ಕಚೇರಿಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಹೊನ್ನಾವರ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಲ್ಲಿಸಬೇಕಾದ ದಾಖಲೆಗಳು:
- ವಿದ್ಯುತ್ ಬಿಲ್
- ಫಲಾನುಭವಿಯ ಆಧಾರ್ ಕಾರ್ಡ್
- ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (ಒಟಿಪಿ ಸ್ವೀಕರಿಸಲು)
- ಪಡಿತರ ಚೀಟಿ
- ಮತದಾರರ ಗುರುತಿನ ಚೀಟಿ
- ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಆದಾಯ ತೆರಿಗೆ ಪಾವತಿದಾರರಿಗೆ ಪ್ಯಾನ್ ಕಾರ್ಡ್ ಕಡ್ಡಾಯ
- ಫಲಾನುಭವಿಯ ವರ್ಗಕ್ಕೆ ಸಂಬಂಧಿಸಿದ ಮಾಹಿತಿ
- ಬಾಡಿಗೆದಾರರಾಗಿದ್ದಲ್ಲಿ ಬಾಡಿಗೆ ಕರಾರು ಪತ್ರ
ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಮೀಕ್ಷೆ ಕಾರ್ಯ ಯಶಸ್ವಿಗೊಳಿಸುವಂತೆ ಹೆಸ್ಕಾಂ ಮನವಿ ಮಾಡಿದೆ.


