Thursday, October 22, 2026
HomeLocal Newsಸಂಕನೂರರನ್ನು ಗೆಲ್ಲಿಸಿ, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಸಂಕನೂರರನ್ನು ಗೆಲ್ಲಿಸಿ, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಯಲ್ಲಾಪುರ: ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ರಾಜ್ಯ ಸರ್ಕಾರದ ಅಸ್ತಿತ್ವದ ಮೇಲೆ ಪರಿಣಾಮ ಬೀರದಿದ್ದರೂ, ಸರ್ಕಾರಕ್ಕೆ ಎಚ್ಚರಿಕೆ ನೀಡುವ ಅವಕಾಶ ಕಲ್ಪಿಸಲಿದೆ. ಉತ್ತರ ಕನ್ನಡದ ಜನರಲ್ಲಿ ರಾಷ್ಟ್ರೀಯ ಹಿತದ ಭಾವನೆ ಬಲವಾಗಿದ್ದು, ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರನ್ನು ಗೆಲ್ಲಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕರೆ ನೀಡಿದರು.

ಪಟ್ಟಣದ ಅಡಿಕೆ ಭವನದಲ್ಲಿ ಭಾನುವಾರ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಸಂಕನೂರ ಪರ ಮತಯಾಚಿಸಿ ಅವರು ಮಾತನಾಡಿದರು.

ಭಾರತ ಇಂದು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ದೇಶದಲ್ಲೇ ಯುದ್ಧ ವಿಮಾನಗಳು ತಯಾರಾಗುತ್ತಿವೆ. ಆಮದುಗಿಂತ ರಫ್ತು ಹೆಚ್ಚಾಗಿದೆ. ಇದು ಭಾರತದ ಶಕ್ತಿಯನ್ನು ತೋರಿಸುತ್ತದೆ. ಭಾರತವನ್ನು ಅಳಿಸಿಹಾಕುತ್ತೇವೆ ಎನ್ನುವ ಮಾತುಗಳಿಗೆ ಈಗ ಅವಕಾಶವಿಲ್ಲ ಎಂದು ಹೇಳಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಒಂದು ಗೆಲುವು ಕೇವಲ ವಿಜಯದ ಸಂದೇಶ ನೀಡುವುದಷ್ಟೇ ಅಲ್ಲ. ಅದರ ಹಿಂದೆ ಹಲವು ಪಾಠಗಳೂ ಇರುತ್ತವೆ. ಸಂಕನೂರರನ್ನು ಮತ್ತೊಮ್ಮೆ ಗೆಲ್ಲಿಸಲು ಸಾಕಷ್ಟು ಕಾರಣಗಳಿವೆ. ಇಂತಹ ಮುಖಂಡರಿಂದ ಪ್ರಜಾಪ್ರಭುತ್ವಕ್ಕೆ ಶಕ್ತಿ ಬರುತ್ತದೆ ಎಂದರು.

ರಾಜ್ಯ ಸರ್ಕಾರ ಆಡಳಿತಾತ್ಮಕವಾಗಿ ಹಿಂದೆಂದೂ ಕಾಣದ ಹಿನ್ನಡೆ ಅನುಭವಿಸುತ್ತಿದೆ. ಸರ್ಕಾರ ರಚನೆಯಾದ ಬಳಿಕ ಏನು ಕೆಲಸ ಮಾಡಿದೆ ಎಂಬುದೇ ತಿಳಿಯುತ್ತಿಲ್ಲ. ನದಿ ಜೋಡಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತೋರುತ್ತಿರುವ ಆಸಕ್ತಿ ವಿಷಾದನೀಯ. ಜಿಲ್ಲೆಯ ಪರಿಸರಕ್ಕೆ ಮಾರಕವಾಗುವ ಯೋಜನೆಗಳನ್ನು ತಡೆಯುವುದು ಅನಿವಾರ್ಯ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಸಂಕನೂರರು ಯಾವುದೇ ಸಮಸ್ಯೆಯ ಕುರಿತು ಸೂಕ್ತ ಅಧ್ಯಯನ ನಡೆಸಿ, ದಾಖಲೆಗಳ ಸಹಿತ ಸದನದಲ್ಲಿ ಮಾತನಾಡುವ ಗುಣ ಹೊಂದಿದ್ದಾರೆ. ಸಮಸ್ಯೆಗಳ ಬಗ್ಗೆ ಮಾತನಾಡುವುದಷ್ಟೇ ಅಲ್ಲದೆ, ಪರಿಹಾರಕ್ಕಾಗಿ ಪಟ್ಟು ಹಿಡಿದು ಕೆಲಸ ಮಾಡುತ್ತಿದ್ದರು. ಮೂರನೇ ಬಾರಿಗೆ ಅವಕಾಶ ಪಡೆಯುತ್ತಿರುವ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ, ಪದವೀಧರ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಕನೂರರನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳಿಗೆ ಬಲ ತುಂಬಬೇಕು ಎಂದರು.

ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಈ ವಿಧಾನ ಪರಿಷತ್ ಚುನಾವಣೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಶಿಸ್ತು ಸಮಿತಿಯ ಉಸ್ತುವಾರಿ ಹಾಗೂ ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಮಾತನಾಡಿ, ಸಂಕನೂರರ ಎರಡು ಅವಧಿಯ ಕಾರ್ಯವೈಖರಿಯನ್ನು ಗಮನಿಸಿ ಪಕ್ಷ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡಿದೆ. ಅವರು ಹ್ಯಾಟ್ರಿಕ್ ಗೆಲುವು ಸಾಧಿಸುವುದರಲ್ಲಿ ಸಂಶಯವಿಲ್ಲ. ಮೋಹನ ಲಿಂಬಿಕಾಯಿ ಬಿಜೆಪಿಯಲ್ಲಿದ್ದು ಪಕ್ಷಕ್ಕೆ ದ್ರೋಹ ಬಗೆದು ಕಾಂಗ್ರೆಸ್ ಸೇರಿದ್ದಾರೆ ಎಂದು ಆರೋಪಿಸಿದ ಅವರು, ಸಂಕನೂರರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ, ಜಿಲ್ಲಾ ಉಪಾಧ್ಯಕ್ಷರಾದ ಎಲ್. ಟಿ. ಪಾಟೀಲ, ಜೆಡಿಎಸ್ ನ ಸೂರಜ್ ನಾಯ್ಕ, ಅಶೋಕ ಛಲವಾದಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಎ.ಎಸ್. ಸಂಗನೂರಮಠ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿ ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಸ್ವಾಗತಿಸಿದರು. ಗುರುಪ್ರಸಾದ ಹೆಗಡೆ ಹರ್ತೆಬೈಲ್‌ ನಿರೂಪಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share