Thursday, October 22, 2026
HomeCrimeಅಂಕೋಲಾ | ಜೈಲಿನ ದಾರಿ ತೋರಿದ ಕಡವೆ ಬೇಟೆ: ಓರ್ವನ ಬಂಧನ, ಐವರು ಪರಾರಿ

ಅಂಕೋಲಾ | ಜೈಲಿನ ದಾರಿ ತೋರಿದ ಕಡವೆ ಬೇಟೆ: ಓರ್ವನ ಬಂಧನ, ಐವರು ಪರಾರಿ

ಅಂಕೋಲಾ: ಅಕ್ರಮವಾಗಿ ಕಡವೆ ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೇಶ್ವರ ಗ್ರಾಮದಲ್ಲಿ ಘಟನೆ ನಡೆದಿದ್ದು, ಪರಾರಿಯಾಗಿರುವ ಐವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

ರಾತ್ರಿ ಗಸ್ತಿನಲ್ಲಿದ್ದ ರಾಮನಗುಳಿ ವಲಯ ಅರಣ್ಯ ಇಲಾಖೆ ಸಿಬ್ಬಂದಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕಲ್ಲೇಶ್ವರ ಗ್ರಾಮದ ಲಕ್ಷ್ಮಣ ಬಾಬು ಸಿದ್ದಿ ಅವರ ಪಟ್ಟಾ ಅಡಿಕೆ ತೋಟದ ಮೇಲೆ ದಾಳಿ ನಡೆಸಲಾಯಿತು.

ದಾಳಿಯ ವೇಳೆ ಕಲ್ಲೇಶ್ವರದ ಚೆನ್ನೆಮನೆ ನಿವಾಸಿ ನಾರಾಯಣ ಗುರುಕ್ಯ ಸಿದ್ದಿ (60) ಎಂಬಾತನನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ಬಳಿಕ ಆತನನ್ನು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಅರಣ್ಯ ಇಲಾಖೆ ದಾಳಿ ನಡೆಸಿದ ಸಂದರ್ಭದಲ್ಲಿ ಹಳವಳ್ಳಿಯ ಕನಕನಹಳ್ಳಿ ನಿವಾಸಿ ಗಣೇಶ ರಾಮು ರಾಥೋಡ (27), ಕಲ್ಲೇಶ್ವರದ ಲಕ್ಷ್ಮಣ ಬಾಬು ಸಿದ್ದಿ (55), ಲೋಕೇಶ ನಾರಾಯಣ ಸಿದ್ದಿ (50), ಶಿವರಾಜ ಲಕ್ಷ್ಮಣ ಸಿದ್ದಿ (30) ಮತ್ತು ರಾಜು ಕೃಷ್ಣ ಸಿದ್ದಿ (45) ಎಂಬ ಐವರು ಪರಾರಿಯಾಗಿದ್ದಾರೆ. ಇವರ ಪತ್ತೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.

ದಾಳಿಯ ವೇಳೆ ಕಡವೆ ಮಾಂಸ ತುಂಬಿದ್ದ ಒಂದು ಚೀಲ, ತಲೆ, ಕಾಲು ಮತ್ತು ಚರ್ಮ ತುಂಬಿದ್ದ ಒಂದು ಚೀಲ ಇತ್ಯಾದಿಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಮೂರು ಕಬ್ಬಿಣದ ಕತ್ತಿಗಳು, ಒಂದು ಚಾಕು ಮತ್ತು ಒಂದು ಹೆಡ್‌ಟಾರ್ಚ್ ವಶಪಡಿಸಿಕೊಳ್ಳಲಾಗಿದೆ.

ಕೃತ್ಯಕ್ಕೆ ಬಳಸಿದ್ದ ಕೆಂಪು ಬಣ್ಣದ ಯಮಹಾ ಬೈಕ್ ಮತ್ತು ನೀಲಿ ಬಣ್ಣದ ಬಜಾಜ್ ಪಲ್ಸರ್ ಬೈಕ್‌ಗಳನ್ನೂ ವಶಕ್ಕೆ ಪಡೆಯಲಾಗಿದೆ. ಈ ಎರಡು ಬೈಕ್‌ಗಳ ಒಟ್ಟು ಮೌಲ್ಯ ಸುಮಾರು ರೂ.1.5 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ, ಮುಂದಿನ ಕಾನೂನು ಕ್ರಮ ಕೈಗೊಂಡಿದೆ.

ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಎಸ್. ಮಾರಿಯಪ್ಪ ನಿರ್ದೇಶನದಂತೆ, ಅಂಕೋಲಾ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಮುಲ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ರಾಮನಗುಳಿ ವಲಯ ಅರಣ್ಯಾಧಿಕಾರಿ ದೀಪಕ್ ಎ. ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ರಾಮನಗುಳಿ ಉಪವಲಯ ಅರಣ್ಯಾಧಿಕಾರಿಗಳಾದ ಪ್ರಕಾಶ್ ಕಲ್ಲಪ್ಪ ಹಟ್ಟಿ, ಅಕ್ಷಯ್ ಇ.ಎಂ., ಸಂತೋಷ್ ಕರಚಳ್ಳಿ, ಗಸ್ತು ಅರಣ್ಯ ಪಾಲಕರಾದ ಸತೀಶ್ ಮರ್ಚಪ್ಪನವರ್, ಅಲ್ತಾಫ್ ಬಿಜಾಪುರ, ಪ್ರಭುದೇವ ಮಕವಾಡ, ಸೋಮನಾಥ ಕಂಬಾರ ಹಾಗೂ ವಾಹನ ಚಾಲಕರು ಮತ್ತು ದಿನಗೂಲಿ ನೌಕರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share