Thursday, October 22, 2026
HomeLocal Newsಇನ್ನು ಗ್ರಾಮ ಒನ್‌ನಲ್ಲೂ ಆರ್‌ಟಿಐ ಅರ್ಜಿ ಸಲ್ಲಿಸಿ!

ಇನ್ನು ಗ್ರಾಮ ಒನ್‌ನಲ್ಲೂ ಆರ್‌ಟಿಐ ಅರ್ಜಿ ಸಲ್ಲಿಸಿ!

ಕಾರವಾರ: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ಅಂಚೆ ಅಥವಾ ಖುದ್ದಾಗಿ ಸಲ್ಲಿಸುವ ಭೌತಿಕ ಆರ್‌ಟಿಐ ಅರ್ಜಿಗಳನ್ನೂ ಆನ್‌ಲೈನ್ ಪೋರ್ಟಲ್‌ನಲ್ಲಿ ದಾಖಲಿಸುವುದು ಕಡ್ಡಾಯವಾಗಿದ್ದು, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿಯೂ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಮುಖ್ಯಮಂತ್ರಿಯವರ ಅನುಮೋದನೆಯೊಂದಿಗೆ ಜಾರಿಗೆ ತರಲಾಗಿರುವ ಈ ಕ್ರಮದಿಂದ ಮಾಹಿತಿ ಹಕ್ಕು ಅರ್ಜಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ, ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ಸುಲಭವಾಗಿ ತಿಳಿದುಕೊಳ್ಳಲು ಅನುಕೂಲವಾಗಲಿದೆ.

ಅಂಚೆ ಮೂಲಕ ಅಥವಾ ನೇರವಾಗಿ ಸಲ್ಲಿಸುವ ಭೌತಿಕ ಆರ್‌ಟಿಐ ಅರ್ಜಿಗಳನ್ನು ಸ್ವೀಕರಿಸಿದ ಸಾರ್ವಜನಿಕ ಪ್ರಾಧಿಕಾರವು ಎರಡು ದಿನಗಳೊಳಗೆ ಆರ್‌ಟಿಐ ಆನ್‌ಲೈನ್ ಪೋರ್ಟಲ್‌ನಲ್ಲಿ ದಾಖಲಿಸಬೇಕು. ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011ರ ಅಡಿಯಲ್ಲಿ ಇದನ್ನು ಖಾತ್ರಿ ಸೇವೆಯಾಗಿ ಅಧಿಸೂಚಿಸಲಾಗಿದೆ.

ಆನ್‌ಲೈನ್‌ನಲ್ಲಿ ದಾಖಲಾದ ಬಳಿಕ ಅರ್ಜಿದಾರರಿಗೆ ನೋಂದಣಿ ಸಂಖ್ಯೆ ದೊರೆಯಲಿದ್ದು, ಅದರ ಮೂಲಕ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಇದರಿಂದ ಅರ್ಜಿಗಳು ಕಳೆದುಹೋಗುವುದು ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗುವುದನ್ನು ತಡೆಯಲು ನೆರವಾಗಲಿದೆ. ನಿಗದಿತ ಎರಡು ದಿನಗಳೊಳಗೆ ಅರ್ಜಿ ದಾಖಲಿಸದಿದ್ದರೆ, ಸಕಾಲ ಕಾಯ್ದೆಯಡಿ ಪರಿಹಾರ ವೆಚ್ಚ ಪಡೆಯಲು ಅರ್ಜಿದಾರರಿಗೆ ಅವಕಾಶವಿದ್ದು, ವಿಳಂಬಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗುತ್ತಾರ.

ಇಂಟರ್ನೆಟ್ ಅಥವಾ ಕಂಪ್ಯೂಟರ್ ಬಳಕೆಯ ಪರಿಚಯವಿಲ್ಲದವರಿಗೂ ಆರ್‌ಟಿಐ ಸೌಲಭ್ಯ ತಲುಪಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ನಾಗರಿಕರು ತಮ್ಮ ಸಮೀಪದ ಸೇವಾ ಕೇಂದ್ರಕ್ಕೆ ತೆರಳಿ ಅಲ್ಲಿನ ಸಿಬ್ಬಂದಿಯ ನೆರವಿನಿಂದ ಅರ್ಜಿ ಸಲ್ಲಿಸಬಹುದು. ನಿಗದಿತ ಆರ್‌ಟಿಐ ಶುಲ್ಕದೊಂದಿಗೆ ಕೇಂದ್ರದ ಸೇವಾ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿದ ತಕ್ಷಣ ಸ್ವೀಕೃತಿ ದಾಖಲೆಯನ್ನೂ ಪಡೆಯಬಹುದು. ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಗ್ರಾಮ ಒನ್ ಕೇಂದ್ರಗಳ ಮೂಲಕ ಈ ಸೇವೆ ಪಡೆಯಲು ಅನುಕೂಲವಾಗಲಿದೆ.

ಭೌತಿಕವಾಗಿ ಸಲ್ಲಿಸಿದ ಅರ್ಜಿಗಳು, ನೇರವಾಗಿ ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳು ಹಾಗೂ ಸೇವಾ ಕೇಂದ್ರಗಳ ಮೂಲಕ ಸಲ್ಲಿಸುವ ಅರ್ಜಿಗಳು ಒಂದೇ ವ್ಯವಸ್ಥೆಯಡಿ ದಾಖಲಾಗಲಿವೆ. ಇದರಿಂದ ಮಾಹಿತಿ ಹಕ್ಕು ಕಾಯ್ದೆ-2005ರ ಕಾಲಮಿತಿಗಳ ಪಾಲನೆಯನ್ನು ಮೇಲ್ವಿಚಾರಣೆ ಮಾಡಲು ಹಾಗೂ ಅರ್ಜಿಗಳ ವಿಲೇವಾರಿಯಲ್ಲಿ ಆಗುವ ವಿಳಂಬವನ್ನು ಗುರುತಿಸಲು ಸಾಧ್ಯವಾಗಲಿದೆ ಎಂದು ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share