Ad
Ad
Ad
Home State ಸರ್ಕಾರಿ ವೈದ್ಯರಿಗೆ ರಾತ್ರಿ ಹಾಜರಾತಿ ಕಡ್ಡಾಯ!

ಸರ್ಕಾರಿ ವೈದ್ಯರಿಗೆ ರಾತ್ರಿ ಹಾಜರಾತಿ ಕಡ್ಡಾಯ!

0
8

ಬೆಂಗಳೂರು: ಸರ್ಕಾರಿ ವೈದ್ಯರು ತಾವು ಕಾರ್ಯನಿರ್ವಹಿಸುವ ಕೇಂದ್ರದ ಕೇಂದ್ರಸ್ಥಾನದಲ್ಲೇ ವಾಸ್ತವ್ಯ ಹೂಡುವುದನ್ನು ಖಚಿತಪಡಿಸಿಕೊಳ್ಳಲು ನ. 1ರಿಂದ ‘ಕರ್ತವ್ಯ’ ಆ್ಯಪ್ ಮೂಲಕ ರಾತ್ರಿ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಇದೇ ವೇಳೆ, ಸರ್ಕಾರಿ ನೌಕರರ ವಿವಿಧ ಸೇವೆಗಳಿಗೆ ಕರ್ನಾಟಕ ಸಕಾಲ ಸೇವೆಗಳ ಕಾಯ್ದೆ-2011ರಡಿ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ.

Ad

ಮೊದಲ ಹಂತದಲ್ಲಿ ತಾಲ್ಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ವೈದ್ಯರಿಗೆ ಈ ನಿಯಮ ಅನ್ವಯವಾಗಲಿದೆ. ರಾತ್ರಿ 9 ಗಂಟೆಯ ನಂತರ ಸಂಬಂಧಪಟ್ಟ ಪಟ್ಟಣ ಅಥವಾ ಗ್ರಾಮದ ಭೌಗೋಳಿಕ ವ್ಯಾಪ್ತಿಯಲ್ಲಿದ್ದು ಆ್ಯಪ್‌ನಲ್ಲಿ ಹಾಜರಾತಿ ದಾಖಲಿಸಬೇಕು.

ಮಂಜೂರಾದ ರಜೆ, ಅನುಮೋದಿತ ಅಧಿಕೃತ ಕರ್ತವ್ಯಕ್ಕಾಗಿ ಕೇಂದ್ರದಿಂದ ಹೊರಗಿರುವುದು ಹಾಗೂ ಪೂರ್ವಾನುಮತಿ ಪಡೆದು ಕೇಂದ್ರ ತೊರೆಯುವುದಕ್ಕೆ ವಿನಾಯಿತಿ ಇರುತ್ತದೆ. ಇಂತಹ ಸಂದರ್ಭಗಳ ಕಾರಣವನ್ನು ಆ್ಯಪ್‌ನಲ್ಲಿ ದಾಖಲಿಸಬೇಕು.

ಲೋಕಾಯುಕ್ತರ ವಿಚಾರಣೆ ವೇಳೆ ಕೆಲವು ಸರ್ಕಾರಿ ಸಿಬ್ಬಂದಿ ಕೇಂದ್ರಸ್ಥಾನದಲ್ಲಿ ವಾಸ್ತವ್ಯವಿರದೆ ಸಾರ್ವಜನಿಕ ಸೇವೆಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆಯುಕ್ತರು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರತಿ ತಿಂಗಳು ಪರಿಶೀಲನೆ ನಡೆಸಲಿದ್ದು, ಅನುಮತಿಯಿಲ್ಲದೆ ಕೇಂದ್ರಸ್ಥಾನದಲ್ಲಿ ಗೈರಾಗುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಪ್ರಾಯೋಗಿಕ ಅನುಭವದ ಆಧಾರದಲ್ಲಿ ಇತರ ಇಲಾಖೆಗಳಿಗೂ ಈ ವ್ಯವಸ್ಥೆ ವಿಸ್ತರಿಸುವ ಉದ್ದೇಶವಿದೆ ಎಂದು ಸಾರ್ವಜನಿಕ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.

ಆಡಳಿತ ಸುಧಾರಣಾ ಆಯೋಗ-2ರ ಏಳನೇ ವರದಿಯ ಶಿಫಾರಸಿನಂತೆ ಸರ್ಕಾರಿ ನೌಕರರ ಹಲವು ಸೇವೆಗಳನ್ನು ಸಕಾಲ ಸೇವೆಗಳ ಕಾಯ್ದೆಯಡಿ ತರಲಾಗಿದೆ. ವೇತನ ವಿತರಣೆ ಮತ್ತು ವೇತನ ಪ್ರಮಾಣಪತ್ರಕ್ಕೆ 3 ಕೆಲಸದ ದಿನ, ಫಾರ್ಮ್-16ಕ್ಕೆ 5 ದಿನ, ಬಾಕಿ ವೇತನಕ್ಕೆ 90 ದಿನ ಹಾಗೂ ವೇತನ ಬಡ್ತಿ, ವಾರ್ಷಿಕ ವೇತನ ಬಡ್ತಿ, ವರ್ಗಾವಣೆ ಅಥವಾ ನಿಯೋಜನೆ ಸಂದರ್ಭದಲ್ಲಿ ಅಂತಿಮ ವೇತನ ಪ್ರಮಾಣಪತ್ರ, ರಜೆ ವೇತನ ಮತ್ತು ಮನೆ ನಿರ್ಮಾಣ/ವಾಹನ ಮುಂಗಡಗಳಿಗೆ 15 ದಿನಗಳ ಗಡುವು ನಿಗದಿಪಡಿಸಲಾಗಿದೆ.

ಹಿರಿಯ ಶ್ರೇಣಿ ಮಂಜೂರಾತಿಗೆ 30 ದಿನ, ಮೊದಲ ವೇತನ ಪಡೆಯಲು ಅನುಮತಿಗೆ 7 ದಿನ, ರಜೆ ಮತ್ತು ಹೆಚ್ಚುವರಿ ಪ್ರಭಾರ ಭತ್ಯೆಗೆ 10 ದಿನ ಹಾಗೂ ಪ್ರಯಾಣ ಭತ್ಯೆಗೆ 30 ದಿನಗಳ ಕಾಲಮಿತಿ ಇದೆ. ವೈದ್ಯಕೀಯ ವೆಚ್ಚ ಮರುಪಾವತಿ, ಪಿಂಚಣಿ ಮತ್ತು ಗ್ರಾಚ್ಯುಟಿ ಪ್ರಸ್ತಾವನೆಗಳನ್ನು ಲೆಕ್ಕಪರಿಶೋಧಕರ ಪ್ರಧಾನ ಕಚೇರಿಗೆ ಕಳುಹಿಸುವುದು, ಜಿಪಿಎಫ್ ಮುಂಗಡ/ಹಿಂಪಡೆಯುವಿಕೆ ಮತ್ತು ಮರಣ ಪ್ರಕರಣಗಳಿಗೆ 30 ದಿನ ನಿಗದಿಯಾಗಿದೆ.

ಈಗಾಗಲೇ ಸಕಾಲದಡಿ ಸೇವೆ ನೀಡುತ್ತಿರುವ ಇಲಾಖೆಗಳು ಹಿಂದಿನಂತೆ ಗೊತ್ತುಪಡಿಸಿದ ಅಧಿಕಾರಿಗಳ ಮೂಲಕವೇ ಸೇವೆ ಮುಂದುವರಿಸಬೇಕು. ಇತರ ಇಲಾಖೆಗಳು ತಮ್ಮ ಗೊತ್ತುಪಡಿಸಿದ ಅಧಿಕಾರಿಗಳ ಪಟ್ಟಿಯನ್ನು 15 ದಿನಗಳೊಳಗೆ ಸಕಾಲ ಮಿಷನ್‌ಗೆ ಸಲ್ಲಿಸಬೇಕು.

ಸರ್ಕಾರಿ ನೌಕರರ ಸೇವೆಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವ ಮೂಲಕ ಆಡಳಿತದಲ್ಲಿ ವಿಳಂಬ ಕಡಿಮೆಗೊಳಿಸುವುದು ಮತ್ತು ಸೇವಾ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಹೆಚ್ಚಿಸುವುದು ಈ ಕ್ರಮಗಳ ಉದ್ದೇಶವಾಗಿದೆ ಎಂದು ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleಇನ್ನು ಗ್ರಾಮ ಒನ್‌ನಲ್ಲೂ ಆರ್‌ಟಿಐ ಅರ್ಜಿ ಸಲ್ಲಿಸಿ!
Next articleಸಕಲ ಸಿದ್ಧಿಗಳ ಕರುಣಿಸುವ ʻಸಿದ್ಧಿದಾತ್ರಿʼ
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!