Ad
Ad
Ad
Home Local News ಯಲ್ಲಾಪುರ | ಕಲಾ ಪರಂಪರೆಗೆ ಮರುಜೀವ

ಯಲ್ಲಾಪುರ | ಕಲಾ ಪರಂಪರೆಗೆ ಮರುಜೀವ

0
4

ಯಲ್ಲಾಪುರ: ಐದು ದಶಕಗಳ ಹಿಂದೆ ಕರಡಿಪಾಲಿನಲ್ಲಿ ಪ್ರತಿ ಏಕಾದಶಿಯಂದು ತಾಳಮದ್ದಳೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದೀಗ ಅದೇ ಕರಡಿಪಾಲಿನಲ್ಲಿ ತಾಳಮದ್ದಳೆ ಕಲಿಕಾ ಕೇಂದ್ರ ಆರಂಭವಾಗಿರುವುದು ಸಂತಸದ ಸಂಗತಿ ಎಂದು ಹಿರಿಯ ವೈದಿಕರು ಹಾಗೂ ತಾಳಮದ್ದಳೆ ಅರ್ಥಧಾರಿ ರಾಮಕೃಷ್ಣ ಭಟ್ಟ ಮಾಗೋಡು ಹರ್ಷ ವ್ಯಕ್ತಪಡಿಸಿದರು.

Ad

ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ತಾಳಮದ್ದಳೆಯ ಬಗ್ಗೆ ಆಸಕ್ತಿ ಬೆಳೆಸುವ ಮತ್ತು ಬಾಲ್ಯದಲ್ಲಿಯೇ ಪೌರಾಣಿಕ ಕಥನಗಳ ಪರಿಚಯ ಮಾಡಿಸುವ ಉದ್ದೇಶದಿಂದ ಮಾಗೋಡಿನ ಶ್ರೀ ಸಿದ್ಧಿವಿನಾಯಕ ಯಕ್ಷ ಕಲಾ ಕೂಟ ಆರಂಭಿಸಿರುವ ತಾಳಮದ್ದಳೆ ಅಭ್ಯಾಸವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಆಸಕ್ತಿಯಿಂದ ಈ ಕಲೆಯನ್ನು ಕಲಿತು, ಕಲಾ ಪ್ರೇಮಿಗಳು ಇಂತಹ ಪ್ರಯತ್ನಗಳಿಗೆ ಬೆಂಬಲ ನೀಡಿದರೆ ಮುಂದಿನ 50 ವರ್ಷಗಳವರೆಗೂ ತಾಳಮದ್ದಳೆಯ ಪರಂಪರೆಯನ್ನು ಮುಂದುವರಿಸಲು ಸಾಧ್ಯವಾಗಲಿದೆ. ಈ ಕೇಂದ್ರ ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ಹಾಗೂ ಪೌರಾಣಿಕ ಕಥನಗಳ ಮಹತ್ವವನ್ನು ತಿಳಿಸುವ ವೇದಿಕೆಯಾಗಲಿ ಎಂದು ಅವರು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ ವಹಿಸಿದ್ದರು. ಟಿಎಂಎಸ್ ನಿರ್ದೇಶಕ ವೆಂಕಟ್ರಮಣ ಭಟ್ ಕಿರಕುಂಭತ್ತಿ, ಪ್ರೌಢಶಾಲೆಯ ದೈಹಿಕ ಶಿಕ್ಷಕ ವಿ.ಪಿ. ಭಟ್, ಶ್ರೀಧರ ಅಣಲಗಾರ ಹಾಗೂ ನರಸಿಂಹ ಭಟ್ ಕುಂಕಿಮನೆ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಶ್ರೇಯಾ ಭಾಗವತ್ ಪ್ರಾರ್ಥಿಸಿದರು. ಮಹಾಬಲೇಶ್ವರ ಭಟ್ ಬೆಳಸೇರು ಹಾಗೂ ಸುಬ್ರಹ್ಮಣ್ಯ ಭಟ್ ಚಂದಗುಳಿ ಯಕ್ಷಗಾನ ಶೈಲಿಯಲ್ಲಿ ಗಣಪತಿ ಸ್ತುತಿ ಸಲ್ಲಿಸಿದರು. ಮಾಲತಿ ಭಟ್ ಕಾರ್ಯಕ್ರಮ ನಿರೂಪಿಸಿದರು.

ಕರಡಿಪಾಲದ ನರಸಿಂಹ ಭಟ್ ಅವರ ನಿವಾಸದ ಆವರಣದಲ್ಲಿ ಪ್ರತಿ ಶನಿವಾರ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಅಭ್ಯಾಸವರ್ಗ ನಡೆಯಲಿದೆ. ನರಸಿಂಹ ಭಟ್ ಕುಂಕಿಮನೆ ತರಬೇತಿ ನೀಡಲಿದ್ದಾರೆ. ಇವರು ಈಗಾಗಲೇ ಹಸರಪಾಲು, ಗುಂದ, ತೇಲಂಗಾರ ಹಾಗೂ ನಂದೊಳ್ಳಿ ಪ್ರೌಢಶಾಲೆ ಸೇರಿದಂತೆ ವಿವಿಧೆಡೆ ತಾಳಮದ್ದಳೆ ತರಬೇತಿಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!