ಕಾರವಾರ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತದಾನ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮತಗಟ್ಟೆಗಳಿರುವ ಆಯ್ದ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಅಕ್ಟೋಬರ್ 23ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.
ಚುನಾವಣಾ ಆಯೋಗದ ವೇಳಾಪಟ್ಟಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ ಈ ಆದೇಶ ಹೊರಡಿಸಲಾಗಿದೆ. ಮತಗಟ್ಟೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಮತದಾರರು ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಮಾತ್ರ ಪ್ರವೇಶಾವಕಾಶ ಇರಲಿದೆ. ಹೀಗಾಗಿ, ಮತಗಟ್ಟೆ ಸ್ಥಾಪಿಸಿರುವ ಆಯ್ದ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ರಜೆ ಘೋಷಿಸಲಾಗಿದೆ.
ರಜೆ ಘೋಷಿಸಿರುವ ಶಾಲಾ-ಕಾಲೇಜುಗಳಲ್ಲಿ ಕಾರವಾರದ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕುನ್ನಿಪೇಟೆ ಮತ್ತು ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆ, ಶಿರಸಿಯ ಶ್ರೀ ಮಾರಿಕಾಂಬಾ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಂದಾನೆ (ಗುಬ್ಬಗೋಡು) ಮತ್ತು ದಾಂಡೇಲಿಯ ಕೆ.ಎಚ್.ಇ.ಪಿ. ಪ್ರೌಢಶಾಲೆ, ಅಂಬಿಕಾನಗರ ಸೇರಿವೆ.
ಇನ್ನು ಸರ್ಕಾರಿ ಕಚೇರಿಗಳ ಪೈಕಿ ಅಂಕೋಲಾ ಮತ್ತು ಕುಮಟಾ ತಹಶೀಲ್ದಾರ್ ಕಚೇರಿಗಳು, ಕುಮಟಾ ತಾಲೂಕಿನ ಗೋಕರ್ಣ ನಾಡಕಚೇರಿ, ಹೊನ್ನಾವರ ತಹಶೀಲ್ದಾರ್ ಕಚೇರಿ ಮತ್ತು ಹೆರಂಗಡಿ ಗ್ರಾಮ ಪಂಚಾಯಿತಿ ಕಚೇರಿ, ಭಟ್ಕಳ ತಹಶೀಲ್ದಾರ್ ಕಚೇರಿ, ಸಿದ್ದಾಪುರ ತಹಶೀಲ್ದಾರ್ ಕಚೇರಿ ಹಾಗೂ ಉಂಬಳೆಮನೆ ನಾಡ ಕಚೇರಿ, ಹೇರೂರು ನಾಡಕಚೇರಿ, ಯಲ್ಲಾಪುರ ತಹಶೀಲ್ದಾರ್ ಕಚೇರಿ ಮತ್ತು ಮಂಚಿಕೇರಿ ನಾಡಕಚೇರಿ, ಮುಂಡಗೋಡ ಹಾಗೂ ಹಳಿಯಾಳ ತಹಶೀಲ್ದಾರ್ ಕಚೇರಿಗಳು, ದಾಂಡೇಲಿ ತಾಲೂಕು ಆಡಳಿತ ಸೌಧ ಮತ್ತು ಜೋಯಿಡಾ ತಹಶೀಲ್ದಾರ್ ಕಚೇರಿ ಹಾಗೂ ರಾಮನಗರದ ಗ್ರಾಮ ಆಡಳಿತಾಧಿಕಾರಿ ಕಚೇರಿಗಳಿಗೆ ಅಕ್ಟೋಬರ್ 23ರಂದು ರಜೆ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.