ಧಾರವಾಡ/ಕಾರವಾರ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಯಲ್ಲಿ ಶೇ.75.66ರಷ್ಟು ಮತದಾನವಾಗಿದ್ದು, ಅಕ್ಟೋಬರ್ 27ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ.
ಅಕ್ಟೋಬರ್ 23ರಂದು ನಡೆದ ಮತದಾನವು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಕ್ಷೇತ್ರದಲ್ಲಿ ಒಟ್ಟು 97,400 ಮತದಾರರಿದ್ದು, ಅವರಲ್ಲಿ 73,692 ಮಂದಿ ಮತ ಚಲಾಯಿಸಿದ್ದಾರೆ.
ಜಿಲ್ಲಾವಾರು ಮತದಾನದ ವಿವರದ ಪ್ರಕಾರ, ಧಾರವಾಡದಲ್ಲಿ 25,240 (ಶೇ.71.87), ಗದಗದಲ್ಲಿ 16,778 (ಶೇ.77.70), ಹಾವೇರಿಯಲ್ಲಿ 19,401 (ಶೇ.78.71) ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 12,273 (ಶೇ.76.52) ಮತಗಳು ಚಲಾವಣೆಯಾಗಿವೆ.
ಮತದಾನದ ಬಳಿಕ ಮೊಹರು ಮಾಡಿದ ಮತಪೆಟ್ಟಿಗೆಗಳು, ಸಂಬಂಧಿತ ಲಕೋಟೆಗಳು ಹಾಗೂ ಇತರ ದಾಖಲೆಗಳನ್ನು ಧಾರವಾಡದ ಎತ್ತಿನಗುಡ್ಡದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಭದ್ರತಾ ಕೊಠಡಿಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಇರಿಸಲಾಗಿದೆ.
ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತಗಳಲ್ಲಿ ಒಟ್ಟು 212 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಅಕ್ಟೋಬರ್ 27ರ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಇದಕ್ಕಾಗಿ 14 ಟೇಬಲ್ಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ಪ್ರತಿ ಟೇಬಲ್ಗೆ ಒಬ್ಬ ಮತ ಎಣಿಕೆ ಮೇಲ್ವಿಚಾರಕರು ಹಾಗೂ ಇಬ್ಬರು ಸಹಾಯಕರನ್ನು ನೇಮಿಸಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮೂರು ಹಂತಗಳಲ್ಲಿ ಸೈದ್ಧಾಂತಿಕ ಹಾಗೂ ಪ್ರಾತ್ಯಕ್ಷಿಕೆ ತರಬೇತಿ ನೀಡಲಾಗಿದೆ.
ಮತ ಎಣಿಕೆ ಕಟ್ಟಡದ ಸುತ್ತಮುತ್ತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಕಲಂ 163ರ ಅಡಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ, ಅಕ್ಟೋಬರ್ 26ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 27ರ ಮಧ್ಯರಾತ್ರಿ 12 ಗಂಟೆಯವರೆಗೆ ಧಾರವಾಡ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಮದ್ಯಪಾನ ಹಾಗೂ ಮದ್ಯ ಸಾಗಣೆ ನಿಷೇಧಿಸಿ ಶುಷ್ಕ ದಿನ ಘೋಷಿಸಲಾಗಿದೆ.
ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಚುನಾವಣಾ ಅಭ್ಯರ್ಥಿಗಳಲ್ಲಿ, ಮತದಾರರ ಲಕ್ಷ್ಯ ಫಲಿತಾಂಶದತ್ತ ನೆಟ್ಟಿದೆ.


