ಬನವಾಸಿ: ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆ ಹಾಗೂ ಶ್ರೀ ಉಮಾ ಮಧುಕೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಜಂಟಿಯಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದವು.
ಇಲ್ಲಿನ ಶ್ರೀ ಜಯಂತಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಶಿಬಿರದಲ್ಲಿ 200ಕ್ಕೂ ಅಧಿಕ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರು ಪಾಲ್ಗೊಂಡು ತಪಾಸಣೆ ನಡೆಸಿ, ಅಗತ್ಯ ಆರೋಗ್ಯ ಸಲಹೆಗಳನ್ನು ನೀಡಿದರು.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆಯ ಜೊತೆಗೆ ರಕ್ತದೊತ್ತಡ, ಮಧುಮೇಹ, ಇಸಿಜಿ, ಹೃದಯ ಸಂಬಂಧಿ ಸಮಸ್ಯೆಗಳು, ಎಲುಬು ಮತ್ತು ಕೀಲು, ಸ್ತ್ರೀರೋಗ, ದಂತ, ನೇತ್ರ ಹಾಗೂ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ತಪಾಸಣೆಗಳನ್ನು ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೀರ್ಘಕಾಲ ವೈದ್ಯಕೀಯ ಸೇವೆ ಸಲ್ಲಿಸಿದ ಡಾ. ರಾಘವೇಂದ್ರ ಬಿ. ನಾಯ್ಕ ಅವರನ್ನು ಸತ್ಕರಿಸಲಾಯಿತು.
ಶಿಬಿರದಲ್ಲಿ ಮೇಜರ್ ಡಾ. ಜ್ಞಾನಪ್ರಕಾಶ ಕಾರಂತ, ಜನರಲ್ ಸರ್ಜನ್ ಡಾ. ವಿಜಯಕುಮಾರ, ಎಲುಬು ಮತ್ತು ಕೀಲು ತಜ್ಞ ಡಾ. ಗೌತಮ ಶೇಟ್, ಸ್ತ್ರೀರೋಗ ತಜ್ಞೆ ಡಾ. ವೀಣಾ ವರ್ಣೇಕರ್, ದಂತ ವೈದ್ಯ ಗಣಪತಿ ಧರ್ಮಶಾಲೆ ಹಾಗೂ ಮಕ್ಕಳ ತಜ್ಞ ಡಾ. ಆಶೀಶ್ ಜನ್ನು ಉಪಸ್ಥಿತರಿದ್ದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ಹೇಮಾದ್ರಿ, ಉಪಾಧ್ಯಕ್ಷ ಪ್ರಕಾಶ ಬಂಗ್ಲೆ, ಶ್ರೀ ಜಯಂತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ಮೃತ್ಯುಂಜಯ ಚೌದರಿ, ಟಿ.ಎಸ್.ಎಸ್. ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಜಗದೀಶ್, ಸಂತೋಷ್ ಸೇರಿದಂತೆ ದೇವಸ್ಥಾನದ ಸಮಿತಿ ಸದಸ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಗಾಯತ್ರಿ ಆಚಾರಿ ಪ್ರಾರ್ಥಿಸಿದರು. ಶ್ವೇತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


