ಬನವಾಸಿ: ಹೊಲದಲ್ಲಿ ಬೆಳೆದು ನಿಂತ ಪೈರನ್ನು ಕಂಡಾಗ ರೈತನ ಮನಸ್ಸಿನಲ್ಲಿ ಮೂಡುವ ಸಂತೋಷವೇ ಬೇರೆ. ತಿಂಗಳುಗಟ್ಟಲೆ ಬೆವರು ಸುರಿಸಿ, ಮಳೆ-ಬಿಸಿಲಿನ ನಡುವೆ ಬೆಳೆ ಕಾಪಾಡಿದ ರೈತ, ಫಸಲು ಕೈಸೇರುವ ಹಂತಕ್ಕೆ ಬಂದಾಗ ಮೊದಲು ನೆನೆಯುವುದು ತಾನು ನಂಬಿದ ಭೂತಾಯಿಯನ್ನು.
ಈ ಕೃತಜ್ಞತೆಯ ಭಾವಕ್ಕೆ ಸಾಕ್ಷಿಯಾದದ್ದು ಸೋಮವಾರ ಬನವಾಸಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಸಂಭ್ರಮದಿಂದ ನಡೆದ ಶೀಗೆ ಹುಣ್ಣಿಮೆ, ಅಂದರೆ ಭೂಮಿ ಪೂಜೆ.
ರೈತರು ಕುಟುಂಬ ಸಮೇತರಾಗಿ ತಮ್ಮ ಹೊಲಗಳಿಗೆ ತೆರಳಿ, ಬೆಳೆದು ನಿಂತ ಪೈರನ್ನು ಕಣ್ತುಂಬಿಕೊಂಡರು. ಗದ್ದೆಯಲ್ಲಿ ಹಸಿರಾಗಿ ಬೆಳೆದು ನಿಂತ ಪೈರು, ತೆನೆಗಳಲ್ಲಿ ತುಂಬಿಕೊಂಡ ಕಾಳುಗಳನ್ನು ಕಂಡು ಸಂತಸಪಟ್ಟರು. ಭೂತಾಯಿಗೆ ಸೀರೆ ಉಡಿಸಿ, ಕುಪ್ಪಸ ತೊಡಿಸಿ ಪೂಜೆ ಸಲ್ಲಿಸಿ, ಉತ್ತಮ ಫಸಲು ನೀಡಿದ್ದಕ್ಕಾಗಿ ಕೃತಜ್ಞತೆ ಅರ್ಪಿಸಿದರು.
‘ನಿನ್ನ ಆಶೀರ್ವಾದದಿಂದ ಗದ್ದೆಗಳು ಹಸಿರಾಗಿವೆ. ತೆನೆಗಳಲ್ಲಿ ಗಟ್ಟಿಯಾದ ಕಾಳು ತುಂಬಿ ಕಣಜ ಸಮೃದ್ಧವಾಗಲಿ. ವರ್ಷವಿಡೀ ರೈತರ ಬದುಕಿನ ಮೇಲೆ ನಿನ್ನ ಕೃಪೆ ಇರಲಿ’ ಎಂದು ಪ್ರಾರ್ಥಿಸಿದರು. ಬೆಳೆಗಳಿಗೆ ಯಾವುದೇ ಕಷ್ಟ-ತೊಂದರೆ ಎದುರಾಗದಿರಲಿ, ದೃಷ್ಟಿ ಬೀಳದಿರಲಿ, ಫಸಲು ಸುರಕ್ಷಿತವಾಗಿ ಮನೆ ಸೇರಲಿ ಎಂದು ಭೂತಾಯಿಗೆ ನೈವೇದ್ಯ ಅರ್ಪಿಸಿ ಚರಗ ಚೆಲ್ಲಿದರು.
ಬೆಳೆದು ನಿಂತ ಪೈರಿನ ನಡುವೆ ಒಂದು ಜಾಗವನ್ನು ಆಯ್ದುಕೊಂಡು ಅಲ್ಲಿ ಉಡಿ ತುಂಬಿ, ಸೀರೆ-ಕುಪ್ಪಸ ತೊಡಿಸಿ ಭೂತಾಯಿಯನ್ನು ಆರಾಧಿಸುವುದು ಹಬ್ಬದ ವಿಶೇಷ. ಈ ಸಂದರ್ಭದಲ್ಲಿ ಪಾಂಡವರ ಮೂರ್ತಿಗಳನ್ನು ರಚಿಸಿ ಅವುಗಳಿಗೂ ಪೂಜೆ ಸಲ್ಲಿಸಿದರು. ಮನೆಯಲ್ಲಿ ಸಿದ್ಧಪಡಿಸಿದ ವಿಶೇಷ ಸಿಹಿ ಕುಂಬಳಕಾಯಿ ಕಡುಬು ಸೇರಿದಂತೆ ವಿವಿಧ ಖಾದ್ಯಗಳನ್ನು ಭೂತಾಯಿಗೆ ನೈವೇದ್ಯವಾಗಿ ಅರ್ಪಿಸಿದರು.
ಪೂಜೆಯ ಬಳಿಕ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ತಾವು ತಂದಿದ್ದ ಅಡುಗೆಯನ್ನು ಸವಿದರು. ಹೊಲದಲ್ಲಿ ಬೆಳೆದ ಬೆಳೆಯ ನಡುವೆ ಕುಟುಂಬದೊಂದಿಗೆ ಸಮಯ ಕಳೆಯುತ್ತಾ ಭೂಮಿ ಹುಣ್ಣಿಮೆಯ ಸಂಭ್ರಮವನ್ನು ಹಂಚಿಕೊಂಡರು.
ಶೀಗೆ ಹುಣ್ಣಿಮೆ ರೈತರ ಪಾಲಿಗೆ ಕೇವಲ ಧಾರ್ಮಿಕ ಆಚರಣೆಯಲ್ಲ. ತಾವು ದುಡಿದು ಬೆಳೆಸಿದ ಫಸಲಿನ ಬಗ್ಗೆ ಸಂತಸ ವ್ಯಕ್ತಪಡಿಸುವ, ಭೂಮಿ ಮತ್ತು ಕೃಷಿಯೊಂದಿಗಿನ ಸಂಬಂಧವನ್ನು ನೆನೆಯುವ ಸಂದರ್ಭವೂ ಹೌದು. ಬೆಳೆ ಕೈ ಸೇರುವ ಮುನ್ನ ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಈ ಸಂಪ್ರದಾಯ, ಕೃಷಿ ಬದುಕಿನಲ್ಲಿ ನಂಬಿಕೆ ಮತ್ತು ಕುಟುಂಬದ ಒಗ್ಗಟ್ಟಿನ ಮಹತ್ವವನ್ನು ಸಾರುತ್ತದೆ.


