ಕೇಂದ್ರ ಜಲಶಕ್ತಿ ಸಚಿವರ ಸ್ಪಷ್ಟನೆ | ಡಿಪಿಆರ್ ಸಿದ್ಧಪಡಿಸುವ ಕಾರ್ಯಕ್ಕೆ ಮಾತ್ರ ಕೇಂದ್ರದ ನೆರವು
ಕಾರವಾರ: ಪ್ರಸ್ತಾವಿತ ಬೇಡ್ತಿ–ಹಿರೇವಡ್ಡಟ್ಟಿ (ಮಾರ್ಪಡಿಸಿದ ಬೇಡ್ತಿ–ವರದಾ) ನದಿ ಜೋಡಣೆ ಯೋಜನೆಯ ರೂಪಿಸುವಿಕೆ ಮತ್ತು ಅನುಷ್ಠಾನದ ಜವಾಬ್ದಾರಿ ರಾಜ್ಯ ಸರ್ಕಾರದ್ದೇ ಹೊರತು, ಕೇಂದ್ರ ಸರ್ಕಾರದ್ದಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಯೋಜನೆಯು ಕಾರ್ಯಸಾಧುವಲ್ಲ ಹಾಗೂ ಸ್ಥಳೀಯ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ. ಹೀಗಾಗಿ ಯೋಜನೆಯ ಅನುಷ್ಠಾನ ಕೈಬಿಡಬೇಕು ಮತ್ತು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ ಎಂದು ಸಂಸದರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ನೀರಾವರಿ ಹಾಗೂ ನದಿ ಜೋಡಣೆ ಯೋಜನೆಗಳ ರೂಪಿಸುವಿಕೆ, ಅಭಿವೃದ್ಧಿ ಮತ್ತು ನಿರ್ವಹಣೆ ಆಯಾ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತವೆ. ರಾಜ್ಯಗಳ ಆಡಳಿತಾತ್ಮಕ ಆದ್ಯತೆ ಹಾಗೂ ಸಂಪನ್ಮೂಲಗಳ ಲಭ್ಯತೆಗೆ ಅನುಗುಣವಾಗಿ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಸಂಬಂಧಪಟ್ಟ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಕೇಂದ್ರವು ತಾಂತ್ರಿಕ ಮಾರ್ಗದರ್ಶನ ಮತ್ತು ಸಲಹೆ ನೀಡಬಹುದೇ ಹೊರತು, ಯೋಜನೆ ಅನುಷ್ಠಾನದಲ್ಲಿ ನೇರ ಪಾತ್ರ ವಹಿಸುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಧಿಕೃತ ಕೋರಿಕೆ ಹಾಗೂ 2025ರ ಡಿಸೆಂಬರ್ 23ರಂದು ಮಾಡಿಕೊಂಡ ಒಪ್ಪಂದದ ಆಧಾರದಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್ಡಬ್ಲ್ಯುಡಿಎ) ಡಿಪಿಆರ್ ಸಿದ್ಧಪಡಿಸುವ ಕಾರ್ಯ ಕೈಗೆತ್ತಿಕೊಂಡಿದೆ. ರಾಜ್ಯ ಸರ್ಕಾರದೊಂದಿಗಿನ ಒಪ್ಪಂದದಂತೆ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆಯೇ ಹೊರತು, ಇದನ್ನೇ ಅಂತಿಮ ಯೋಜನಾ ವರದಿ ಎಂದು ಪರಿಗಣಿಸಬಾರದು ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಡಿಪಿಆರ್ ಸಿದ್ಧಪಡಿಸುವ ಹಂತದಲ್ಲಿ ನದಿಯ ಕೆಳಹಂತದ ಪರಿಸರ ವ್ಯವಸ್ಥೆ, ಕೃಷಿ, ಮೀನುಗಾರಿಕೆ, ಅಂತರ್ಜಲ ಹಾಗೂ ಬೇಡ್ತಿ ಜಲಾನಯನ ಪ್ರದೇಶದ ಜನರ ಅಗತ್ಯಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತದೆ. ರಾಜ್ಯ ಸರ್ಕಾರ ಕೋರಿರುವ ಪ್ರದೇಶಗಳಲ್ಲಿನ ನೀರಿನ ವಾಸ್ತವಿಕ ಅಗತ್ಯವನ್ನೂ ರಾಜ್ಯದೊಂದಿಗೆ ಸಮಾಲೋಚಿಸಿ ಅಳೆಯಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಸಂಸದ ಕಾಗೇರಿ ಅವರು ಪ್ರಸ್ತಾಪಿಸಿರುವ ಪರಿಸರ ಮತ್ತು ಜನಹಿತದ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅರಣ್ಯ, ವನ್ಯಜೀವಿ ಮತ್ತು ಪರಿಸರಕ್ಕೆ ಸಂಬಂಧಿಸಿದ ಶಾಸನಬದ್ಧ ನಿಯಮಗಳ ಕುರಿತು ರಾಜ್ಯ ಸರ್ಕಾರ ವರದಿ ಸಲ್ಲಿಸಿದರೆ, ಅದನ್ನು ಕೇಂದ್ರ ಪರಿಸರ ಇಲಾಖೆಯು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ಸಚಿವರ ಉತ್ತರದಲ್ಲಿ ತಿಳಿಸಲಾಗಿದೆ.