ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಅಪಘಾತಗಳ ಆತಂಕದ ನಡುವೆಯೇ ಜನರ ಸಂಚಾರ ಮುಂದುವರಿದಿದೆ. ಇಂತಹ ಸ್ಥಿತಿಯಿಂದ ಬೇಸತ್ತ ಅಂಕೋಲಾದ ಜನಶಕ್ತಿ ವೇದಿಕೆ ಕಾರ್ಯಕರ್ತರು ಭಾನುವಾರ ಬಾಳೆಗುಳಿ ಕ್ರಾಸ್ನಲ್ಲಿ ಹೊಂಡಗಳಿಗೇ ಪಿಂಡ ಪ್ರದಾನ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಬಾಳೆಗುಳಿಯಿಂದ ಮಾಸ್ತಿಕಟ್ಟಾವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಸವಾಲಾಗಿದೆ. ರಸ್ತೆಯುದ್ದಕ್ಕೂ ಹೊಂಡಗಳು ಬಿದ್ದಿದ್ದು, ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಸ್ಥಳೀಯರ ಅಸಮಾಧಾನ. ಕಳೆದ ವರ್ಷವೂ ಪ್ರತಿಭಟನೆ ನಡೆದ ಬಳಿಕ ತೇಪೆ ಹಾಕಲಾಗಿತ್ತು. ಆದರೆ, ಆ ಕಾಮಗಾರಿ ಹೆಚ್ಚು ಕಾಲ ಬಾಳಿಕೆ ಬರಲಿಲ್ಲ.
ಹೊಂಡಗಳಿಂದಾಗಿ ಅಪಘಾತದ ಭೀತಿ ಮಾತ್ರವಲ್ಲ, ವಾಹನಗಳ ಬಿಡಿಭಾಗಗಳು ಹಾಳಾಗಿ ಮಾಲಕರಿಗೆ ಆರ್ಥಿಕ ಹೊರೆಯೂ ಹೆಚ್ಚುತ್ತಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ಬಾಳೆಗುಳಿ–ಮಾಸ್ತಿಕಟ್ಟಾ ಮಾರ್ಗದಲ್ಲಿ ಸುಗಮ ಸಂಚಾರವೇ ಕಷ್ಟವಾಗಿದೆ. ಈ ರಸ್ತೆಯಲ್ಲಿ ಸಂಭವಿಸಿರುವ ಅಪಘಾತಗಳು ಹಾಗೂ ಸಾವು-ನೋವುಗಳ ಹಿನ್ನೆಲೆಯಲ್ಲಿ ಜನರ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ. ರಸ್ತೆ ದುರಸ್ತಿಯಲ್ಲಿನ ನಿರ್ಲಕ್ಷ್ಯ ಮುಂದುವರಿದರೆ ಜನರ ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಜನರ ಹಿತದೃಷ್ಟಿಯಿಂದ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಹೇಳಿದರು.
ವೇದಿಕೆಯ ಪ್ರಮುಖ ಗೋಪಾಲಕೃಷ್ಣ ನಾಯಕ ಮಾತನಾಡಿ, ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವವರು ಸುರಕ್ಷಿತವಾಗಿ ಮನೆ ಸೇರುತ್ತೇವೆಯೇ ಎಂಬ ಆತಂಕದಲ್ಲಿದ್ದಾರೆ. ಈ ಹೋರಾಟ ಯಾವುದೇ ನಿರ್ದಿಷ್ಟ ಸರ್ಕಾರದ ವಿರುದ್ಧವಲ್ಲ, ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿರುವ ವ್ಯವಸ್ಥೆಯ ವಿರುದ್ಧದ ಆಕ್ರೋಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ, ಕಳೆದ ವರ್ಷದ ಪ್ರತಿಭಟನೆಯ ಬಳಿಕ ಕೈಗೊಂಡ ತೇಪೆ ಕಾಮಗಾರಿ ಒಂದೇ ವರ್ಷದಲ್ಲಿ ಹಾಳಾಗಿರುವುದನ್ನು ಉಲ್ಲೇಖಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭಾಸ್ಕರ ನಾರ್ವೇಕರ್, ಉಮೇಶ ನಾಯ್ಕ, ನಾಗಾನಂದ ಬಂಟ ಸೇರಿದಂತೆ ಜನಶಕ್ತಿ ವೇದಿಕೆಯ ಪ್ರಮುಖರು ಭಾಗವಹಿಸಿದ್ದರು. ಲಾರಿ ಮಾಲೀಕರ ಸಂಘದ ತುಳಸಿದಾಸ ಕಾಮತ್, ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ, ಸಾಮಾಜಿಕ ಕಾರ್ಯಕರ್ತ ಸುರೇಶ ವೆರ್ಣೇಕರ್, ವಿಜಯಕುಮಾರ ನಾಯ್ಕ, ಶಿವಾನಂದ ನಾಯ್ಕ ಅಲಗೇರಿ ಹಾಗೂ ಶಂಕರ ಗೌಡ ಮತ್ತಿತರರು ಅಣಕು ಪ್ರದರ್ಶನದ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.