ಕುಮಟಾ: ಕುಮಟಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು ಪ್ರಕರಣವನ್ನು ಭೇದಿಸಿರುವ ಕುಮಟಾ ಪೊಲೀಸರು, ಶಿರಸಿ ತಾಲೂಕಿನ ಕೊಡ್ಲಗದ್ದೆ ಸಮೀಪದ ಜಡ್ಡಿಗದ್ದೆ ನಿವಾಸಿ ಮಹಮ್ಮದ್ ಆಸೀದ್ (21) ಎಂಬ ಆರೋಪಿಯನ್ನು ಬಂಧಿಸಿ ಕಳವು ಮಾಡಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಕೆಎಸ್‌ಆರ್‌ಟಿಸಿ ನಿರ್ವಾಹಕ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಶಿವಮೂರ್ತಿ ಎನ್.ಎಸ್. ಅವರಿಗೆ ಸೇರಿದ ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ಅ.20ರಂದು ರಾತ್ರಿ 9.15ರ ಸುಮಾರಿಗೆ ಕುಮಟಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿಟ್ಟಾಗ ಕಳವು ಮಾಡಲಾಗಿತ್ತು. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿಶೇಷ ತಂಡ ರಚಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ತಾಂತ್ರಿಕ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದರು. ಆತನಿಂದ ಅಂದಾಜು 20 ಸಾವಿರ ರೂ. ಮೌಲ್ಯದ ಕಳವು ಮಾಡಿದ್ದ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ್ ಎಸ್.ವಿ. ಅವರ ಮಾರ್ಗದರ್ಶನದಲ್ಲಿ, ಕುಮಟಾ ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ. ನೇತೃತ್ವದಲ್ಲಿ ಪಿಎಸ್‌ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಕಿರಣ ನಾಯ್ಕ ಮತ್ತು ಸುಬ್ರಹ್ಮಣ್ಯ ಹೆಗಡೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.


