ಯಲ್ಲಾಪುರ: ಹೊಂಡಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗುವ ಭೀತಿ, ಗುಂಡಿಗಳ ನಡುವೆ ವಾಹನ ಚಲಾಯಿಸುವ ಸಂಕಷ್ಟ, ಅಧಿಕಾರಿಗಳ ಭರವಸೆಗಾಗಿ ಕಾಯುವ ಅನಿವಾರ್ಯತೆ. ಯಲ್ಲಾಪುರ–ಶಿರಸಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಪಾಲಿಗೆ ನಿತ್ಯದ ಪ್ರಯಾಣವೇ ಸವಾಲಾಗಿದೆ. ರಸ್ತೆ ದುರಸ್ತಿಗೆ ಇನ್ನೂ ಕ್ರಮ ಕೈಗೊಳ್ಳದಿದ್ದರೆ 15 ದಿನಗಳೊಳಗೆ ಸವಣಗೇರಿಯಲ್ಲಿ ರಸ್ತೆ ತಡೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
ತಾಲೂಕಿನ ಸವಣಗೇರಿ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಅಪಘಾತ ಈ ರಸ್ತೆಯ ದುಸ್ಥಿತಿಗೆ ಮತ್ತೊಂದು ಉದಾಹರಣೆಯಾಗಿದೆ. ರಸ್ತೆಯಲ್ಲಿನ ಹೊಂಡಗಳನ್ನು ತಪ್ಪಿಸಿಕೊಂಡು ಸಾಗುತ್ತಿದ್ದ ಕಾರಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಕಾರಿನ ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ಯುವಕನಿಗೆ ನಿಯಂತ್ರಣ ಸಾಧಿಸಲು ಸಾಧ್ಯವಾಗದೆ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಬಿದ್ದು ಗಾಯಗೊಂಡಿದ್ದಾನೆ.
ಸವಣಗೇರಿಯಿಂದ ಶಿರಸಿಯವರೆಗಿನ ರಸ್ತೆಯ ಹಲವು ಭಾಗಗಳು ಸಂಪೂರ್ಣ ಹದಗೆಟ್ಟಿವೆ. ಒಂದು ಕಿ.ಮೀ. ರಸ್ತೆ ಸ್ವಲ್ಪಮಟ್ಟಿಗೆ ಸುಸ್ಥಿತಿಯಲ್ಲಿದ್ದರೆ, ಮುಂದಿನ ಎರಡು ಕಿ.ಮೀ. ರಸ್ತೆಯಲ್ಲಿ ಹೊಂಡಗಳದ್ದೇ ಕಾರುಬಾರು. ಹೊಂಡಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸುವುದೇ ಸವಾರರಿಗೆ ದೊಡ್ಡ ಸವಾಲಾಗಿದೆ. ಹೊರ ಊರಿನ ವಾಹನ ಸವಾರರಷ್ಟೇ ಅಲ್ಲದೆ, ಪ್ರತಿದಿನ ಇದೇ ಮಾರ್ಗದಲ್ಲಿ ಸಂಚರಿಸುವ ಸ್ಥಳೀಯರೂ ರಸ್ತೆಯ ದುಸ್ಥಿತಿಯಿಂದ ಬೇಸತ್ತಿದ್ದಾರೆ.
ಅಧಿಕಾರಿಗಳ ಭರವಸೆ ಭರವಸೆಯಾಗಿಯೇ ಉಳಿಯಿತು!
ಮಳೆಗಾಲದ ಆರಂಭದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿ, ರಸ್ತೆ ತಡೆ ಹೋರಾಟದ ಎಚ್ಚರಿಕೆ ನೀಡಿದ್ದರು. ಆಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ಯಲ್ಲಾಪುರ–ಶಿರಸಿ ರಸ್ತೆ ಸುಧಾರಣೆಗೆ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎಂದು ತಿಳಿಸಿದ್ದರು. ಮಳೆಗಾಲದಲ್ಲಿ ಶಾಶ್ವತ ಕಾಮಗಾರಿ ನಡೆಸಲು ಸಾಧ್ಯವಿಲ್ಲದ ಕಾರಣ ತಾತ್ಕಾಲಿಕವಾಗಿ ಹೊಂಡಗಳನ್ನು ಮುಚ್ಚಿ, ಮಳೆಗಾಲ ಮುಗಿದ ತಕ್ಷಣ ರಸ್ತೆ ಸುಧಾರಣೆ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಆದರೆ, ರಸ್ತೆಯ ಸ್ಥಿತಿಯಲ್ಲಿ ನಿರೀಕ್ಷಿತ ಸುಧಾರಣೆ ಕಂಡುಬಂದಿಲ್ಲ. ಅಪಘಾತದ ಭೀತಿಯೂ ಕಡಿಮೆಯಾಗಿಲ್ಲ. ಕಾಮಗಾರಿ ಆರಂಭವಾಗುವ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ಅಧಿಕಾರಿಗಳ ಭರವಸೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಅಸಮಾಧಾನವಿದೆ.
15 ದಿನಗಳಲ್ಲಿ ಕಾಮಗಾರಿ ಆರಂಭಿಸಿ, ಇಲ್ಲವೇ ಹೋರಾಟ ಎದುರಿಸಿ!
ರಸ್ತೆಯ ದುಸ್ಥಿತಿಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಕಾಮಗಾರಿ ಆರಂಭವಾಗದಿರುವುದು ಏಕೆ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ. ಮುಂದಿನ 15 ದಿನಗಳೊಳಗಾಗಿ ಟೆಂಡರ್ ಆಗಿರುವ ರಸ್ತೆ ಸುಧಾರಣೆ ಕಾಮಗಾರಿ ಆರಂಭಿಸದಿದ್ದರೆ ಸವಣಗೇರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸ್ಥಳೀಯ ಮುಖಂಡ ಸುಬ್ಬಣ್ಣ ಉದ್ದಾಬೈಲ ಸೇರಿದಂತೆ ಸಾರ್ವಜನಿಕರು ಎಚ್ಚರಿಸಿದ್ದಾರೆ.
ಇನ್ನಷ್ಟು ಅಪಘಾತಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.


